ಗೃಹಿಣಿ ಉದ್ಯೋಗಿಯಲ್ಲವೇ?

fdgfhcgb
Published on
ಗೃಹಿಣಿ ಎಂದರೆ ಸಮಾಜದಲ್ಲಿ ಮೂಗು ಮುರಿಯುವವರೇ ಹೆಚ್ಚು. ಸಮಾಜವನ್ನು ದೂರುವ ಮುನ್ನ ಗೃಹಿಣಿಯರಾದ ನಾವು ನಮ್ಮ ಆಲೋಚನೆ ಬದಲಾಯಿಸಿ ಕೊಳ್ಳಬೇಕು. ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಸಂಸಾರಕ್ಕಾಗಿ, ಮಕ್ಕಳಿಗಾಗಿ ದುಡಿಯುವ ನಾವು ಉದ್ಯೋಗಸ್ಥರಲ್ಲವೇ...?

|ಡಾ. ನವ್ಯ ಎಸ್., ಮಕ್ಕಳ ಆಪ್ತಸಮಾಲೋಚಕಿ

ಗೃಹಿಣಿಯರಾದ ನಾವು ನಮ್ಮ ಗುರಿ, ನಮ್ಮ ಆಸೆ ಬದಿಗಿಟ್ಟು ಸಂಸಾರಕ್ಕಾಗಿ, ಮಕ್ಕಳಿಗಾಗಿ ದುಡಿಯುತ್ತೇವೆ. ನಾವು ಮಾಡುವ ಕೆಲಸಕ್ಕೆ ಯಾವುದೇ ಸಂಬಳವಿಲ್ಲ ಮತ್ತು ನಮಗೆ ಯಾವುದೇ ರಜೆ ದಿನಗಳಿಲ್ಲ ಎಂದು ತಿಳಿದಿದ್ದರೂ ನಾವು ನಮ್ಮ ಕರ್ತವ್ಯವನ್ನು ಸಂತೋಷದಿಂದ, ಮನಃಪೂರ್ವಕವಾಗಿ, ನಿಷ್ಠೆಯಿಂದ ಪಾಲಿಸುತ್ತ ಬರುತ್ತಿದ್ದೇವೆ, ಮುಂದೆಯೂ ಪಾಲಿಸುತ್ತೇವೆ. ನಾವು ಒಂದು ದಿನ ರಜೆ ತೆಗೆದುಕೊಂಡರೆ ಮನೆಯ ಪರಿಸ್ಥಿತಿ ಹೇಗಿರುವುದು ಎನ್ನುವುದು ಗೊತ್ತಿರುವ ವಿಷಯ. ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಮಗೆ ಅಭಿಮಾನವಿರಬೇಕು ಮತ್ತು ಗೌರವವಿರಬೇಕು. ಗೃಹಿಣಿ ಎಂದರೆ ಅಡುಗೆಮನೆ ಮತ್ತು ಮನೆ ಕೆಲಸ. ಇದು ಬಿಟ್ಟರೆ ಬೇರೆ ಪ್ರಪಂಚವಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ಮನಸ್ಥಿತಿಯಿಂದ ನಾವು ಹೊರಬರಬೇಕು. ಸಂಸಾರ ಮತ್ತು ಮಕ್ಕಳ ಜವಾಬ್ದಾರಿಯೊಂದಿಗೆ ನಮ್ಮ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ನಾವು ಮಾನಸಿಕ, ದೈಹಿಕವಾಗಿ ಆರೋಗ್ಯದಿಂದಿದ್ದರೆ ಮಾತ್ರ ನಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಲು ಸಾಧ್ಯ. ಗೃಹಿಣಿಯಾಗುವುದು ಸುಲಭದ ಮಾತಲ್ಲ ಅದಕ್ಕೂ ಸಹ ಕೌಶಲಗಳಿರಬೇಕು. ಆ ಕೌಶಲಗಳು ನಮ್ಮಲ್ಲಿ ಇರುವುದರಿಂದಲೇ ನಮ್ಮ ಸ್ಥಾನವನ್ನು ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗುವುದು. ನಮ್ಮ ಮೇಲೆ ನಮಗೆ ಗೌರವ ಮತ್ತು ವಿಶ್ವಾಸವಿದ್ದರೆ ಎಂತಹ ಕಠಿಣ ಕೆಲಸಗಳೂ ಸುಲಭವಾಗಿಬಿಡುತ್ತವೆ.

ಮಾನಸಿಕ ಆರೋಗ್ಯ ಬಹಳ ಮುಖ್ಯ
  1. ಆತ್ಮಪ್ರಜ್ಞೆ ಬೆಳೆಸಿಕೊಳ್ಳುವುದು ಅತಿ ಅವಶ್ಯಕ. ನಮ್ಮ ಆಸಕ್ತಿ ಮತ್ತು ಶಕ್ತಿಯನ್ನು ಅರಿತು ಮುನ್ನಡೆಯಬೇಕು

2. ನಮ್ಮ ನಿತ್ಯ ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಅಂತಹ ಸನ್ನಿವೇಶದಲ್ಲಿ ವಿಚಲಿತಗೊಳ್ಳದೆ ಸಮಸ್ಯೆ ಪರಿಹರಿಸುವ ಕಡೆ ಗಮನಹರಿಸಬೇಕು

3. ಕೆಲವು ಪರಿಸ್ಥಿತಿಗಳು ನಮ್ಮ ಹಿಡಿತದಲ್ಲಿರುವುದಿಲ್ಲ. ಅಂತಹ ಸಮಯದಲ್ಲಿ ಅದು ಹೇಗೆ ಇದೆಯೋ ಹಾಗೆ ಒಪ್ಪಿಕೊಳ್ಳುವುದು ಉತ್ತಮ

4. ನಮ್ಮ ದಿನಚರಿಯಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕು. ನಮಗಾಗಿ ಸಮಯ ಮೀಸಲಿಡಬೇಕು. ಆ ಅಲ್ಪಸ್ವಲ್ಪ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು.

5. ಚಿತ್ರಕಲೆ, ಮಕ್ಕಳಿಗೆ ಪಾಠ ಹೇಳಿಕೊಡುವುದು, ಬರೆಯುವುದರಲ್ಲಿ ಆಸಕ್ತಿಯಿದ್ದರೆ ಪತ್ರಿಕೆಗಳಿಗೆ ಲೇಖನ ಬರೆಯುವುದು ಇತ್ಯಾದಿ... ಇದರಿಂದಾಗಿ ನಮ್ಮ ಆತ್ಮವಿಶ್ವಾಸ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ.

6. ನಮಗೆ ಆಸಕ್ತಿ ಇರುವ ವಿಷಯವನ್ನು ಉದ್ಯೋಗವನ್ನಾಗಿ ಆಯ್ಕೆಮಾಡಿಕೊಂಡರೆ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು. ಇದರಿಂದಾಗಿ ನಮ್ಮಲ್ಲಿ ಜೀವನೋತ್ಸಾಹ ಮೂಡುತ್ತದೆ, ಆತ್ಮವಿಶ್ವಾಸ ಬೆಳೆಯುತ್ತದೆ.

7. ಅಡುಗೆ, ಮನೆ ಕೆಲಸ, ಮಕ್ಕಳ ಆರೈಕೆ ಹೀಗೆ ಅದರಲ್ಲೇ ಮುಳುಗಿರುತ್ತೇವೆ. ನಮ್ಮ ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ. ಸಮತೋಲಿತ ಆಹಾರ ತೆಗೆದುಕೊಳ್ಳಬೇಕು.

8. ದೈಹಿಕ ಚಟುವಟಿಕೆಗಳಾದ ವ್ಯಾಯಾಮ, ಯೋಗ ಮುಂತಾದವು ನಮ್ಮ ದಿನಚರಿಯಲ್ಲಿ ಇರಬೇಕು.

9. ಆರೋಗ್ಯದ ಸಮಸ್ಯೆ ಬಂದಾಗ ಕಡೆಗಣಿಸದೆ ಅದರ ಕಡೆ ಗಮನ ಹರಿಸಿ, ವೈದ್ಯರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net