ಮೈಸೂರಿನಲ್ಲಿ ಹಾಡ ಹಗಲೇ ದರೋಡೆ; ಪಾರ್ಸೆಲ್ ಹಿಡಿದು ಬಂದವರಿಂದ ನಡೆಯಿತು ದುಷ್ಕೃತ್ಯ

New Project (10)
Published on

ಮೈಸೂರು: ಪಾರ್ಸೆಲ್ ಬಂದಿದೆ ಎಂದು ಹೇಳಿ ಮನೆಯೊಳಗೆ ನುಗ್ಗಿದ ಕಳ್ಳರು ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ದೋಚಿದ ಘಟನೆ ಹಾಡಹಗಲೇ ನಂಜನಗೂಡಿನ ರಾಮಸ್ವಾಮಿ ಬಡಾವಣೆಯ ಒಂದನೇ ಬ್ಲಾಕ್​ನಲ್ಲಿ ನಡೆದಿದೆ.

ಕಳ್ಳರು ಡೂಪ್ಲಿಕೇಟ್ ಪಾರ್ಸೆಲ್ ಬಾಕ್ಸ್ ತೋರಿಸಿ ಮನೆಯ ಬಾಗಿಲು ತೆಗೆಯಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಬಾಗಿಲು ತೆಗೆಯುತ್ತಿದ್ದಂತೆ ಒಳ ನುಗ್ಗಿದ ಕಳ್ಳರು ಬೆದರಿಸಿ ಕೈಕಾಲು ಕಟ್ಟಿ ಹಾಕಿದ್ದಾರೆ. ಕಿರುಚದಂತೆ ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದಾರೆ. ನಂತರ ಮಹಿಳೆಯ ಮೈಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ ಪಡೆದುಕೊಂಡಿದ್ದಾರೆ. ನಂತರ ಮನೆಯ ಬೀರುವಿನಿಂದ ಮತ್ತೊಂದು ಜೊತೆ ಕೈಬಳೆ, ನೆಕ್ಲೆಸ್, ಕಿವಿಯೋಲೆ, ತಲೆಬೊಟ್ಟು ಸೇರಿ 175 ಗ್ರಾಂ.ಗೂ ಹೆಚ್ಚು ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾರೆ.

ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ. ಕಳ್ಳರು ಕನ್ನಡ, ತಮಿಳು, ಹಿಂದಿ ಮಾತನಾಡುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ನಂಜನಗೂಡು ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net