ಮನೆ ಮಾಲೀಕರೇ ಯಾಮಾರಿದ್ರೆ ಜೈಲು: ಮಾನವ ಕಳ್ಳಸಾಗಣೆದಾರರಿಗೆ ಬಾಡಿಗೆಗೆ ಕೊಟ್ಟರೆ ಆಸ್ತಿ ಮುಟ್ಟುಗೋಲು

Tolet
Published on

| ರಮೇಶ ದೊಡ್ಡಪುರ ಬೆಂಗಳೂರು

ವಿಶ್ವದ ಮೂರನೇ ಅತಿ ದೊಡ್ಡ ಅಪರಾಧ ಎನಿಸಿರುವ ಮಾನವ ಕಳ್ಳಸಾಗಣೆ ತಡೆಗಟ್ಟುವುದಕ್ಕಾಗಿ ಕಠಿಣ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಅದರನ್ವಯ ಅಪರಾಧ ಕೃತ್ಯಕ್ಕೆ ಬಳಸಿಕೊಳ್ಳುವ ಸ್ಥಳದ ಮಾಲೀಕರೂ ಶಿಕ್ಷೆಯ ವ್ಯಾಪ್ತಿಗೆ ಒಳಪಡಲಿ ದ್ದಾರೆ. ಮಾನವ ಕಳ್ಳಸಾಗಣೆ (ತಡೆ, ಕಾಳಜಿ ಹಾಗೂ ಪುನರ್ವಸತಿ) ಮಸೂದೆ -2021ನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಿದ್ಧಪಡಿಸಿದೆ. ಮಸೂದೆಯಲ್ಲಿ, ಆಸ್ತಿ ಮಾಲೀಕರನ್ನೂ ಶಿಕ್ಷೆಗೆ ಗುರಿಪಡಿಸುವ ಜತೆಗೆ, ಇಡೀ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್​ಐಎ) ಕೈಗೊಳ್ಳುವಂತಹ ಮಹತ್ವದ ಅಂಶಗಳಿವೆ.

ಆಸ್ತಿ ಮುಟ್ಟುಗೋಲು: ಮಾನವ ಕಳ್ಳಸಾಗಣೆಗೆ ಬಳಸಲಾದ ಸ್ಥಳದ ಮಾಲೀಕ, ಅದನ್ನು ಗುತ್ತಿಗೆ ಪಡೆದವರಿಗೆ ಮೊದಲ ಬಾರಿಯ ಅಪರಾಧಕ್ಕೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ; ಎರಡನೇ ಬಾರಿಗೆ ಅಪರಾಧ ಎಸಗಿದರೆ 7 ವರ್ಷ ಕಠಿಣ ಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ಪ್ರಸ್ತಾಪಿಸಲಾಗಿದೆ. ಇದರಲ್ಲಿ ಆಸ್ತಿಯ ಮಾಲೀಕರಷ್ಟೇ ಅಲ್ಲದೆ ಗುತ್ತಿಗೆದಾರರು, ಆಸ್ತಿ ನಿರ್ವಹಣೆ ಮಾಡುತ್ತಿರುವ ಮಾಲೀಕರ ಏಜೆಂಟ್​ಗಳನ್ನು ಮಸೂದೆಯ 41ನೇ ಅಂಶ ಒಳಗೊಂಡಿದೆ. ಮನೆ ಅಥವಾ ಸ್ಥಳವನ್ನು ಬಾಡಿಗೆ ಪಡೆದು, ಬೇರೆಯವರು ಮಾನವ ಕಳ್ಳಸಾಗಣೆ ನಡೆಸಲು ಅವಕಾಶ ನೀಡಿದ್ದರೆ ಅಂಥವರನ್ನೂ ಕಾಯ್ದೆಯ ಶಿಕ್ಷೆಯ ವ್ಯಾಪ್ತಿಗೆ ಸೇರಿಸಲಾಗಿದೆ.

ಈ ವಿಚಾರ ತಿಳಿದೇ ಇರಲಿಲ್ಲ ಎಂದು ಆಸ್ತಿಯ ಮಾಲೀಕರು ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಕೃತ್ಯ ನಡೆದ ಸ್ಥಳದ ಮಾಲೀಕರಿಗೆ ಇದರ ಅರಿವಿತ್ತು ಎಂದು ‘ಭಾವಿಸಿಕೊಳ್ಳಲಾಗುತ್ತದೆ ಹಾಗೂ ಶಿಕ್ಷೆಗೆ ಅರ್ಹರಾಗುತ್ತಾರೆ’ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ತಮಗೆ ಈ ಕೃತ್ಯದ ಮಾಹಿತಿ ಇರಲಿಲ್ಲ ಎಂದು ಸಾಬೀತುಪಡಿಸುವ ಹೊಣೆ ಮಾಲೀಕರದ್ದಾಗಿರುತ್ತದೆ. ಅಂತಹ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲೂ ನ್ಯಾಯಾಲಯಕ್ಕೆ ಅಧಿಕಾರ ನೀಡಲಾಗಿದೆ.

ಎನ್​ಐಎ ತನಿಖೆ: ಮಾನವ ಕಳ್ಳಸಾಗಣೆ ಪ್ರಕರಣದ ವಿಚಾರಣೆಗೆ ರಾಷ್ಟ್ರೀಯ ತನಿಖಾ ದಳವನ್ನು (ಎನ್​ಐಎ) ತನಿಖಾ ಏಜೆನ್ಸಿಯನ್ನಾಗಿ ನೇಮಕ ಮಾಡಿರುವುದು ಮಸೂದೆಯಲ್ಲಿರುವ ಮತ್ತೊಂದು ಪ್ರಮುಖ ಅಂಶ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಕಳ್ಳಸಾಗಣೆಯನ್ನೂ ಭಯೋತ್ಪಾದನೆಗೆ ಸಮಾನವಾಗಿ ಈ ಕಾಯ್ದೆಯಲ್ಲಿ ಪರಿಗಣಿಸಿದಂತಿದೆ. ಬಹá-ತೇಕ ಮಾನವ ಕಳ್ಳಸಾಗಣೆಗಳು ಅಂತಾರಾಷ್ಟ್ರೀಯ ನೆಟ್​ವರ್ಕ್ ಸಂಪರ್ಕ ಹೊಂದಿರುವ ಕಾರಣ ಎನ್​ಐಎ ಹೆಗಲಿಗೆ ತನಿಖೆ ವಹಿಸಲಾಗಿದೆ.

ಮಾನವ ಕಳ್ಳಸಾಗಣೆ ತಡೆ ಸಮಿತಿ: ಒಂದೆಡೆ ಎನ್​ಐಎ ತನಿಖೆ ನಡೆಸಿ ವಿಶೇಷ ಎನ್​ಐಎ ನ್ಯಾಯಾಲಯಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಮುಂದಾದರೆ ಇನ್ನೊಂದೆಡೆ, ಕೃತ್ಯದ ಸಂತ್ರಸ್ತರಿಗೆ ಪರಿಹಾರದ ಕಡೆಗೂ ಗಮನ ನೀಡಲಾಗಿದೆ. ಈ ಕಾರ್ಯಕ್ಕಾಗಿ ದೇಶಮಟ್ಟದಲ್ಲಿ ಕೇಂದ್ರ ಸರ್ಕಾರದ ಅನೇಕ ಸಚಿವಾಲಯಗಳು, ನಾಗರಿಕ ಸೇವಾ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳ ಸಮಿತಿ ರಚಿಸಲಾಗುತ್ತದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ಇಂತಹ ಸಮಿತಿ ರಚಿಸಲಾಗುತ್ತದೆ. ಕಾಯ್ದೆ ಜಾರಿ, ಸಂತ್ರಸ್ತರಿಗೆ ರಕ್ಷಣೆ, ಪುನರ್ವಸತಿ, ಪರಿಹಾರ ನೀಡುವ ಕಾರ್ಯವನ್ನು ಈ ಸಮಿತಿಗಳು ಮಾಡಲಿವೆ.

ಬಹುಕಾಲದ ಬೇಡಿಕೆ: ಚಿಕ್ಕ ಮಕ್ಕಳನ್ನು ಅಪಹರಿಸಿ ವಿದೇಶಗಳ ಗ್ರಾಹಕರಿಗೆ ಮಾರಾಟ ಮಾಡುವುದು, ಮಹಿಳೆಯರನ್ನು ಅರಬ್ ದೇಶಗಳು ಸೇರಿ ವಿವಿಧೆಡೆಗೆ ವೇಶ್ಯಾವಾಟಿಕೆಯಂತಹ ಕಾರಣಕ್ಕೆ ಮಾರುವುದು, ಕೆಲಸ ಕೊಡಿಸುವ ನೆಪದಲ್ಲಿ ಕರೆದೊಯ್ದು ಜೀತದಾಳುಗಳಾಗಿ ದುಡಿಸಿಕೊಳ್ಳುವುದು, ಭಿಕ್ಷಾಟನೆಗೆ ದೂಡುವುದು ಸೇರಿ ಅನೇಕ ರೀತಿಯಲ್ಲಿ ನಡೆಯುತ್ತವೆ. ಸದ್ಯ ಇವುಗಳನ್ನು ಭಾರತೀಯ ದಂಡ ಸಂಹಿತೆ, ಅನೈತಿಕ ಸಾಗಣೆ ಕಾಯ್ದೆ (ಐಟಿಪಿಎ), ಬಾಲಾಪರಾಧ ಕಾಯ್ದೆ, ಜೀತವಿಮುಕ್ತಿ ಕಾಯ್ದೆ ಸೇರಿ ಹತ್ತಾರು ಕಾಯ್ದೆಗಳ ಅಂಶಗಳನ್ನು ಬಳಸಿ ತನಿಖೆ, ಪುನರ್ವಸತಿ ಕಲ್ಪಿಸಲಾಗುತ್ತಿದೆ. ಏಕೀಕೃತ ಕಾನೂನು ಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಸ್ಪಂದಿಸಿ 2018ರಲ್ಲಿ ಕೇಂದ್ರ ಸರ್ಕಾರ ಕಾಯ್ದೆ ರೂಪಿಸಿತ್ತು. ಲೋಕಸಭೆಯಲ್ಲಿ ಅಂಗೀಕೃತವಾಯಿತಾದರೂ ರಾಜ್ಯಸಭೆಯಲ್ಲಿ ಮಂಡನೆಯಾಗುವ ವೇಳೆಗೆ ಸರ್ಕಾರದ ಅವಧಿ ಮುಗಿದು ಚುನಾವಣೆ ಎದುರಾಯಿತು. ಇದೀಗ ಪ್ರಮುಖ ಬದಲಾವಣೆಗಳೊಂದಿಗೆ ಹೊಸ ಮಸೂದೆ ಸಿದ್ಧವಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವೆಬ್​ಸೈಟ್​ನಲ್ಲಿ ಕರಡು ಲಭ್ಯವಿದ್ದು, 14ರವರೆಗೆ ಠಚ್ಞಠಿಚ್ಞ್ಠಚ್ಟಿಚ್ಜಚಚಿಚಠಜಿಃಜಟಡ.ಜ್ಞಿ ವಿಳಾಸಕ್ಕೆ ಅಭಿಪ್ರಾಯಗಳನ್ನು ಕಳಿಸಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net