ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಕೂಟರ್ ಸ್ಫೋಟಗೊಂಡು ಸುಟ್ಟು ಭಸ್ಮವಾದ ಮನೆ; ಒಂದೇ ಕುಟುಂಬದ ನಾಲ್ವರೂ ಪವಾಡ ಸದೃಶ ರೀತಿಯಲ್ಲಿ ಪಾರು

vehicle
Published on

ಲಕ್ನೋ: ಚೌಕ್ ಪ್ರದೇಶದಲ್ಲಿ ಮನೆಯೊಳಗೆ ಬ್ಯಾಟರಿ ಸ್ಕೂಟರ್ ಚಾರ್ಜ್ ಮಾಡುವಾಗ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ಇಂದು (ಆಗಸ್ಟ್ 10) ತಿಳಿಸಿದ್ದಾರೆ. ಸ್ಕೂಟಿ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಒಂದೇ ಕುಟುಂಬದ ನಾಲ್ವರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಠಾಕೂರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲ್ ನಿಗಮ್ ರಸ್ತೆಯ ನಿವಾಸಿ ಮೊಹಮ್ಮದ್ ನಸೀಮ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಚೌಕ್ ಅಗ್ನಿಶಾಮಕ ಠಾಣಾಧಿಕಾರಿ ಪುಷ್ಪೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.

“ನಾವು ಮಾಹಿತಿ ಪಡೆದ ತಕ್ಷಣ, ಎರಡು ಅಗ್ನಿಶಾಮಕಗಳನ್ನು ಕಳುಹಿಸಲಾಯಿತು ಮತ್ತು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಯಾವುದೇ ಪ್ರಾಣ ಹಾನಿಯಾಗಿಲ್ಲ,'' ಎಂದು ಅವರು ತಿಳಿಸಿದರು.

ಸ್ಫೋಟಗೊಂಡ ಸ್ಕೂಟರ್ ಚೈನೀಸ್ ಆಗಿದ್ದು, ಒಂದೂವರೆ ವರ್ಷಗಳ ಹಿಂದೆ 65 ಸಾವಿರ ರೂ.ಗೆ ಖರೀದಿಸಿದ್ದೆ ಎಂದು ಮೊಹಮ್ಮದ್ ನಸೀಮ್ ಹೇಳಿದ್ದಾರೆ.
“ನಾವು ದೊಡ್ಡ ಶಬ್ದವನ್ನು ಕೇಳಿದರೂ ಸ್ಫೋಟ ಸಂಭವಿಸಿದೆಯೇ ಅಥವಾ ಅದು ಸುಟ್ಟುಹೋಗಿದೆಯೇ ಎಂದು ನನಗೆ ಸ್ಪಷ್ಟವಾಗಿರಲಿಲ್ಲ. ನಾನು ನನ್ನ ಮನೆಯ ನೆಲ ಮಹಡಿಯಲ್ಲಿ ಸ್ಕೂಟಿಯನ್ನು ಚಾರ್ಜ್‌ಗೆ ಹಾಕಿದ್ದೆ. ಆದರೆ ಕೆಲವು ಗಂಟೆಗಳ ನಂತರ ನಾನು ಮೆಟ್ಟಿಲುಗಳ ಕೆಳಗೆ ಬಂದಾಗ ಹೊಗೆ ಮತ್ತು ಬೆಂಕಿಯನ್ನು ನೋಡಿದೆ. ಹೀಗಾಗಿ ಕೂಡಲೇ ನೆರೆಹೊರೆಯವರ ಸಹಾಯ ಪಡೆದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇನೆ'' ಎಂದು ಮೊಹಮ್ಮದ್ ನಸೀಮ್ ತಿಳಿಸಿದರು.

“ನಾನು ಯಾವಾಗಲೂ ಬ್ಯಾಟರಿ ಸ್ಕೂಟರ್ ಬಳಸುತ್ತೇನೆ ಎಂದ ಮೊಹಮ್ಮದ್ ನಸೀಮ್, ನಾನು ಬ್ಯಾಟರಿ ಸ್ಕೂಟರ್‌ ಬಳಸುವುದಕ್ಕೆ ಶುರು ಮಾಡಿ 15 ವರ್ಷಗಳಾಗಿವೆ. ಮೊದಲು ಸ್ಕೂಟರ್‌ಗಳು ಭಾರತೀಯ ಬ್ರಾಂಡ್‌ಗಳಾಗಿದ್ದವು. ಆದರೆ ಈ ಬಾರಿ ನಾನು ಈ ಚೈನೀಸ್ ಸ್ಕೂಟಿಯನ್ನು ಖರೀದಿಸಿದೆ. ಅದು ಕೇವಲ ಒಂದು ವರ್ಷದ ಬ್ಯಾಟರಿ ವಾರಂಟಿಯನ್ನು ಹೊಂದಿದೆ'' ಎಂದರು.

ನಸೀಮ್ ಅವರ ಪ್ರಕಾರ, ಸ್ಕೂಟಿಯ ಚಾರ್ಜರ್ ಹೆಚ್ಚು ಬಿಸಿಯಾಗಿರುವುದು ಬೆಂಕಿ ಬರಲು ಕಾರಣವಾಗಿರಬಹುದು. “ಈ ಬ್ಯಾಟರಿ ಸ್ಕೂಟರ್‌ಗಳ ಚಾರ್ಜಿಂಗ್ ಕೇಬಲ್ ಹೆಚ್ಚಾಗಿ ಬಿಸಿಯಾಗುತ್ತದೆ. ಈ ಬಾರಿಯೂ ಹಾಗೆಯೇ ಆಗಿರಬೇಕು'' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net