ಗಾಳಿಮಳೆಗೆ ಮನೆ ಕುಸಿದು, ತಾಯಿ ಸೇರಿ ಮೂವರು ಮಕ್ಕಳು ಬಲಿ| Delhi Rain

Delhi Rain
Published on

Delhi Rain: ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಮನೆ ಕುಸಿದು 26 ವರ್ಷದ ಮಹಿಳೆ ಸೇರಿದಂತೆ ಮೂವರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ಶುಕ್ರವಾರ (ಮೇ.2) ನಡೆದಿದೆ.

ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಗುಡುಗು ಸಹಿತ ಮಳೆಯಿಂದಾಗಿ ಮನೆ ಕುಸಿದು 26 ವರ್ಷದ ಮಹಿಳೆ ಮತ್ತು ಅವಳ ಮೂವರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ್ದು, ಮಹಿಳೆಯ ಪತಿ ಗಾಯಗೊಂಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ, ಕೊಳವೆ ಬಾವಿ ಬಳಿಯ ಕೋಣೆಯ ಮೇಲೆ ಮರವೊಂದು ಬಿದ್ದಿದ್ದರಿಂದ ಮನೆ ಕುಸಿದಿರುವುದು ಕಂಡುಬಂದಿದೆ.

ಮಹಿಳೆ ಮತ್ತು ಅವರ ಮೂವರು ಮಕ್ಕಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದ್ದು, ಬದುಕುಳಿದ ಆಕೆಯ ಪತಿ ಗಾಯಗೊಂಡಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ ರಾಜಧಾನಿಯಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ನಗರದಲ್ಲಿ ವ್ಯಾಪಕ ನೀರು ನಿಂತು ಸಂಚಾರ ಅಸ್ತವ್ಯಸ್ತವಾಯಿತು. ವಿಮಾನಗಳ ಹಾರಾಟದಲ್ಲೂ ಬೆಳಗಿನ ಜಾವ ಪರಿಣಾಮ ಬೀರಿದ್ದು, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಮೂರು ವಿಮಾನಗಳ ಹಾರಾಟವನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು 100ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net