ಮನೆ ಕಳ್ಳತನ ಪ್ರಕರಣ: ರೌಡಿಶೀಟರ್ ಸೇರಿ ಇಬ್ಬರ ಸೆರೆ

Arrest Kaidhi
Published on

ಬೆಂಗಳೂರು: ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೇರಿ ಇಬ್ಬರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಗೋಪಾಲನಗರ ಠಾಣೆ ರೌಡಿ ಶೀಟರ್ ಮಣಿಕಂಠ(೨೨) ಮತ್ತು ಸಂಜಯ್(೧೯) ಬಂಧಿತರು. ಆರೋಪಿಗಳಿಂದ ೭.೦೫ ಲಕ್ಷ ರೂ. ಮೌಲ್ಯದ ೧೨೧ ಗ್ರಾಂ ಚಿನ್ನಾಭರಣ ಹಾಗೂ ೧ ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಲಗ್ಗೆರೆಯಲ್ಲಿ ವ್ಯಕ್ತಿಯೊಬ್ಬರ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಬಿ.ಎನ್.ಪುನೀತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈ ಹಿಂದೆ ರೌಡಿಶೀಟರ್ ಮಣಿಕಂಠನ ತಾಯಿ, ಪತ್ನಿ, ಅಜ್ಜಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಬಂಧಿತರಿಂದ ೧೨ ಲಕ್ಷ ರೂ. ಮೌಲ್ಯದ ೨೫೪ ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಕೃತ್ಯಕ್ಕೆ ತಾಯಿ, ಪತ್ನಿ ಸಾಥ್:
ಆರೋಪಿಗಳ ಪೈಕಿ ಮಣಿಕಂಠ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಈ ಹಿಂದೆ ಮಹಾಲಕ್ಷ್ಮೀ ಲೇಔಟ್, ಪೀಣ್ಯ, ಬ್ಯಾಡರಹಳ್ಳಿ, ಗಂಗಮ್ಮನಗುಡಿ, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಮನೆಗಳವು, ದೊಂಬಿ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದು ಮತ್ತೆ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕತ್ಯಗಳಲ್ಲಿ ತೊಡಗಿದ್ದ. ಈ ಕಳ್ಳತನ ಪ್ರಕರಣದಲ್ಲಿ ಈ ಹಿಂದೆ ಮಣಿಕಂಠನ ತಾಯಿ ಸುಧಾ, ಪತ್ನಿ ಕಾವ್ಯ, ಸಂಬಂಧಿ ಲಕ್ಷಮ್ಮ ಹಾಗೂ ಸಹಚರ ಅಭಿಷೇಕ್ ಎಂಬಾತನ ಬಂಧನವಾಗಿತ್ತು. ಮಣಿಕಂಠ ಮತ್ತು ಆತನ ಸಹಚರರು ಕದ್ದ ಮಾಲುಗಳನ್ನು ಈ ಮೂವರು ಮಹಿಳೆಯರು ವಿಲೇವಾರಿ ಮಾಡುತ್ತಿದ್ದರು. ಈ ಮೂಲಕ ಆರೋಪಿಗಳ ಕೃತ್ಯಕ್ಕೆ ಸಾಥ್ ನೀಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net