

ದೆಹಲಿ: ಮಗನ ಹುಟ್ಟುಹಬ್ಬವನ್ನು ಆಚರಿಸಿ ಸಂಬಂಧಿಕರನ್ನು ಬಿಡಲು ಹೋಗಿದ್ದ ವೇಳೆ ತಂದೆಯೊಬ್ಬ ಮೃತಪಟ್ಟ ದಾರುಣ ಘಟನೆ ದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ.
ಲಖನ್, ಆತನ ಸಹೋದರಿಯು ಫ್ಲೋರಾ ಮತ್ತು ಆಕೆಯ ಮಗಳು ದೀಕ್ಷಾ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಫ್ಲೋರಾಳ ಪತಿ ನನ್ಹೆ ರಾಮ್ ಎಂಬಾತ ಮಾತ್ರ ಬದುಕುಳಿದಿದ್ದಾನೆ.
ನಿನ್ನೆ ತಡರಾತ್ರಿ ಲಖನ್ ತನ್ನ ಮನೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ. ನಂತರ ತನ್ನ ತಂಗಿ ಫ್ಲೋರಾ, ಆಕೆಗ ಗಂಡ ನನ್ಹೆ ರಾಮ್ ಹಾಗೂ ಮಗಳನ್ನು ಬಿಡಲು ಮೋಟಾರ್ಬೈಕ್ ತೆಗೆದುಕೊಂಡು ಖುದ್ದಾಗಿ ಹೋಗಿದ್ದ. ಈ ವೇಳೆ ನೈಋತ್ಯ ದ್ವಾರಕಾ ಪ್ರದೇಶದಲ್ಲಿ ಅವರ ಮೋಟಾರ್ ಬೈಕಿಗೆ ಎಸ್‌ಯುವಿ ಡಿಕ್ಕಿ ಹೊಡೆದಿತ್ತು.
ಈ ವೇಳೆ ಎಲ್ಲರೂ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂರು ಜನ ಮೃತಪಟ್ಟಿದ್ದು, ನನ್ಹೆ ರಾಮ್ ಮಾತ್ರ ಬದುಕುಳಿದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ದ್ವಾರಕಾ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಎಸ್‌ಯುವಿ ಚಾಲಕ ಅಬ್ರಾರ್ನನ್ನು ಬಂಧಿಸಲಾಗಿದೆ.(ಏಜೆನ್ಸೀಸ್)