

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಯಿತಲ್ಲ ಎಂದು ರಾಜ್ಯದ ಜನತೆ ನಿಟ್ಟುಸಿರು ಬಿಡುವಷ್ಟರಲ್ಲೇ ಗ್ರಾಹಕರಿಗೆ ಹೋಟೆಲ್ ಬರೆ ಬೀಳುವುದು ನಿಶ್ಚಿತವಾಗಿದೆ. ವಾಣಿಜ್ಯ ಬಳಕೆ ಎಲ್ಪಿಜಿ ಮೇಲಿನ ನಿರಂತರ ದರ ಹೆಚ್ಚಳದಿಂದ ಕಂಗೆಟ್ಟಿರುವ ರಾಜ್ಯ ಹೋಟೆಲ್ ಮಾಲೀಕರು, ದೀಪಾವಳಿ ಬಳಿಕ ಊಟ ತಿಂಡಿಗಳ ಮೇಲಿನ ದರವನ್ನು ಶೇ.15ರಿಂದ ಶೇ.20ರವರೆಗೆ ಬೆಲೆ ಏರಿಸಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ 8 ಸಾವಿರ ಸೇರಿದಂತೆ ರಾಜ್ಯದಲ್ಲಿ ಅಂದಾಜು 40 ಸಾವಿರ ಹೋಟೆಲ್ಗಳಿವೆ. ಕರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮವೀಗ ನಿಧಾನವಾಗಿ ಚೇತರಿಕೆಯತ್ತ ಸಾಗುತ್ತಿದೆ. ಲಾಕ್ಡೌನ್ ತೆರವು ಬಳಿಕ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಮಾರ್ಚ್ನಲ್ಲಿ ಲಾಕ್ಡೌನ್ ಘೊಷಿಸಿದ್ದರಿಂದ ಸಾವಿರಾರು ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಬಾಗಿಲು ಹಾಕಿದ್ದವು. ಐಷಾರಾಮಿ ಹೋಟೆಲ್ಗಳಿಗೂ ಸಾಕಷ್ಟು ಹೊಡೆತ ಬಿದ್ದಿತ್ತು. 2020 ವರ್ಷ ಪೂರ್ತಿ ಹೋಟೆಲ್ ಉದ್ಯಮಕ್ಕೆ ಕರಾಳವಾಗಿತ್ತು. ಆದರೂ, ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಇನ್ನಿತರ ತೆರಿಗೆಯನ್ನು ಮಾಲೀಕರು ಪಾವತಿಸಿದ್ದರು. ಆದರೆ,ಎಲ್ಪಿಜಿ, ವಿದ್ಯುತ್ ಶುಲ್ಕ ಹೆಚ್ಚಳ ಮತ್ತು ಊಟ ತಯಾರಿಸುವ ಪರಿಣತ ಸಿಬ್ಬಂದಿ ವೇತನ ಏರಿಕೆ ಸೇರಿ ಇನ್ನಿತರ ಕಾರಣಗಳಿಂದ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಊಟ ತಿಂಡಿಗಳ ಬೆಲೆ ಹೆಚ್ಚಿಸಲಿದ್ದಾರೆ. ಬೆಲೆ ಏರಿಕೆ ಮಾಡದಿದ್ದರೆ ಮತ್ತಷ್ಟು ಆರ್ಥಿಕ ನಷ್ಟ ಅನುಭವಿಸಿ ಹೋಟೆಲ್ಗಳಿಗೆ ಬೀಗ ಹಾಕಬೇಕಾಗಲಿದೆ. ಆದ್ದರಿಂದ ಊಟ ತಿಂಡಿಗಳ ಬೆಲೆ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘದ ಪದಾಧಿಕಾರಿಗಳು.
1,370 ರೂ.ಭಾರ!: ಸಿಲಿಂಡರ್ ದರ ಹೆಚ್ಚಳ ಆಧಾರದ ಮೇರೆಗೆ ಹೋಟೆಲ್ ಮಾಲೀಕರು ಊಟ ತಿಂಡಿಗಳ ಮೇಲೆ ದರ ಹೆಚ್ಚಿಸುತ್ತಾರೆ. ಇತ್ತೀಚೆಗಷ್ಟೇ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಏಕಾಏಕಿ 260 ರೂ. ಏರಿಕೆಯಾಗಿದೆ. ರಾಜ್ಯದಲ್ಲಿ ಕರೊನಾ ಕಾಲಿಡುವ ಮುನ್ನ 19 ಕೆಜಿ ವಾಣಿಜ್ಯ ಸಿಲಿಂಡರ್ಗೆ 900 ರೂ.ಇತ್ತು. ಈಗ 2,270 ರೂ.ಆಗಿದೆ. ಒಟ್ಟಾರೆ 1,370 ರೂ. ಏರಿಕೆಯಾಗಿದೆ. ಕರೊನಾ ಆರಂಭವಾದಾಗಿನಿಂದ ಈವರೆಗೆ 8 ಬಾರಿ ಸಿಲಿಂಡರ್ ದರ ಹೆಚ್ಚಿಸಲಾಗಿದೆ. ಮುಂದೆಯೂ ದರ ಹೆಚ್ಚಾಗುವ ಭೀತಿ ಆವರಿಸಿದೆ.
ಆತಂಕವೇನು?: ಗ್ರಾಹಕರಿಂದ ಕರೊನಾ ಭಯವನ್ನು ದೂರ ಸರಿಸಿ ಸುರಕ್ಷತಾ ಕ್ರಮದೊಂದಿಗೆ ಹೋಟೆಲ್ಗಳನ್ನು ನಡೆಸಲಾಗುತ್ತಿದೆ. ಆದರೆ, ಊಟ ತಿಂಡಿ ದರ ಏರಿಸಿದರೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಆತಂಕವೂ ಹೋಟೆಲ್ ಮಾಲೀಕರಿಗಿದೆ.
ಮಿನಿ ಹೋಟೆಲ್ಗಳಿಗೆ ಚಿಂತೆ: ಕರೊನಾದಿಂದ ಬದುಕೇ ಸರ್ವನಾಶ ಆಯಿತೆಂದು ಚಿಂತಾಕ್ರಾಂತರಾಗಿದ್ದ ಸಣ್ಣ ಪುಟ್ಟ ಹೊಟೇಲ್ ಹಾಗೂ ಗೂಡಂಗಡಿ ವರ್ತಕರು ಹಿಂದಿನ ಹಳಿಗೆ ಮರಳಿದ್ದಾರೆ. ಖಾಯಂ ಗ್ರಾಹಕರಾದ ಕೂಲಿ ಕಾರ್ವಿುಕರು, ಖಾಸಗಿ ಉದ್ದಿಮೆ ಹಾಗೂ ಹಣಕಾಸು ಸಂಸ್ಥೆಯ ಉದ್ಯೋಗಿಗಳಿಗೆ ಮಧ್ಯಾಹ್ನದ ಊಟ, ಚಹ ಮತ್ತಿತರೆ ತಿಂಡಿ ನೀಡುತ್ತಾ ಒಂದಿಷ್ಟು ಕಾಸು ಸಂಪಾದನೆ ಮಾಡುತ್ತಿದ್ದಾರೆ. ಇದರಿಂದ ಗೂಡಂಗಡಿ ನಡೆಸುವವರ ಬದುಕಿನಲ್ಲಿ ಭರವಸೆಯ ಬೆಳಕು ಕಾಣಿಸತೊಡಗಿದೆ. ಆದರೆ, ಏಕಾಏಕಿ ಎಲ್ಪಿಜಿ ದರ ಹೆಚ್ಚಳದಿಂದ ಮಿನಿ ಹೋಟೆಲ್ಗಳ ಮಾಲೀಕರು ಕಂಗಾಲಾಗಿದ್ದು, ದರ ಏರಿಸಬೇಕೇ? ಬೇಡವೇ ಎಂಬ ಚಿಂತನೆಯಲ್ಲಿದ್ದಾರೆ. ದರ ಏರಿಸಿದರೆ ಗ್ರಾಹಕರ ಸಂಖ್ಯೆ ಇಳಿಯಲಿದೆ. ಏರಿಸದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ.
ವಾಣಿಜ್ಯ ಬಳಕೆ ಎಲ್ಪಿಜಿ ದರ ಏರಿಕೆಯಿಂದ ಹೋಟೆಲ್ ಮಾಲೀಕರು ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘಕ್ಕೆ ಕರೆ ಮಾಡಿ ದೋಸೆ, ಇಡ್ಲಿ ಮುಂತಾದ ತಿಂಡಿಗಳ ಮೇಲೆ ಶೇ.15ರಿಂದ ಶೇ.20ವರೆಗೆ ದರ ಏರಿಕೆ ಮಾಡಲಿದ್ದೇವೆ ಎನ್ನುತ್ತಿದ್ದಾರೆ. ದರ ಏರಿಕೆ ಮಾಡದಿದ್ದರೆ ಹೋಟೆಲ್ ಉದ್ಯಮ ನಷ್ಟ ಅನುಭವಿಸಬೇಕಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ 2 ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಅದಕ್ಕೆ ನಾವು ಅವರಿಗೆ ದರ ಏರಿಕೆ ಮಾಡಿ ಎಂದು ಹೇಳುತ್ತಿದ್ದೇವೆ. ದೀಪಾವಳಿ ಬಳಿಕ ಊಟ ತಿಂಡಿಗಳ ದರ ಏರಿಸಲಾಗುವುದು. | ಬಿ.ಚಂದ್ರಶೇಖರ್ ಹೆಬ್ಬಾರ್ ಅಧ್ಯಕ್ಷ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ.