ಬೇಸಿಗೆಯಲ್ಲಿ ಸುಡು ಬಿಸಿಲು, ನಾನಾ ಸಮಸ್ಯೆಗಳು

5cbp1-1.jpg
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೇಸಿಗೆಯ ತಾಪ ದಿನೇ ದಿನೆ ಹೆಚ್ಚುತ್ತಿರುವುದರ ನಡುವೆ ಜನರು ಸನ್ ಸ್ಟ್ರೊಕ್ ಸಮಸ್ಯೆಗೆ ತುತ್ತಾಗುತ್ತಿದ್ದು ಇದರಿಂದ ಪಾರಾಗಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಬೇಸಿಗೆ ಅವಧಿ ಹಿನ್ನೆಲೆಯಲ್ಲಿ ಸರಾಸರಿ ಗರಿಷ್ಠ ೩೨ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಬೆಳಿಗ್ಗೆ ೮ ರಿಂದಲೇ ಸುಡು ಬಿಸಿಲು ಕಾಡುತ್ತಿದೆ. ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಬದಲಾದ ಹವಾಮಾನದಿಂದ ಜನರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಹಾಗಾಗಿ ಮಧ್ಯಾಹ್ನದ ವೇಳೆ ಜನದಟ್ಟಣೆ ಕಡಿಮೆಯಾಗಿದೆ. ಮತ್ತೊಂದೆಡೆ ಆರೋಗ್ಯದ ಏರುಪೇರಿನ ವಿವಿಧ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಬಹುತೇಕರು ದೇಹ ತಂಪಾಗಿಸುವ ಕಲ್ಲಂಗಡಿ, ವಿವಿಧ ಪಾನೀಯಾಗಳು, ಐಸ್ ಕ್ರೀಂ, ಮೊಸರು, ಮಜ್ಜಿಗೆ ಸೇವನೆಯ ಒಲವು ತೋರುತ್ತಿದ್ದಾರೆ. ಇತ್ತೀಚೆಗೆ ಬಿಸಿ ಬಿಸಿ ಕಾಫಿ, ಚಹಾ ಅಂಗಡಿಗಳ ವ್ಯಾಪಾರವು ಕಡಿಮೆಯಾಗಿದೆ.


*ಬಿಸಿಲಿಗೆ ನಾನಾ ಕಿರಿಕಿರಿಗಳು  
ಬಿಸಿಲಿನ ತಾಪ ಹೆಚ್ಚಿರುವಾಗ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ. ಸೂರ್ಯನ ಪ್ರಖರತೆಯಿಂದ ಪ್ರಮುಖವಾಗಿ ಡಿ ಹೈಡ್ರೇಷನ್, ಸನ್ ಸ್ಟ್ರೊಕ್, ಜ್ವರ, ತಲೆನೋವು, ಮೂರ್ಛೆ ಹೋಗುವುದು, ಸ್ನಾಯು ಸೆಳೆತ, ಸಿಡುಕುತನ, ಹೆಚ್ಚಾಗಿ ಬೆವರುವುದು, ಬಲಹೀನತೆ, ತಲೆ ತಿರುಗುವಿಕೆ, ಗೊಂದಲಮಯ ರೀತಿಯ ವರ್ತನೆ, ತ್ವರಿತ ಉಸಿರಾಟ, ಹೃದಯ ಬಡಿತ, ವಾಕರಿಕೆ ಮತ್ತು ವಾಂತಿ, ಸುಸ್ತು, ದೇಹದ ಉಷ್ಣತೆ ಜಾಸ್ತಿಯಾಗುವುದು ಸೇರಿ ಅನೇಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.


*ಮುಂಜಾಗ್ರತಾ ಕ್ರಮ  
ಅನಾರೋಗ್ಯ ಉಂಟಾದರೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಫೆಬ್ರವರಿಯಿಂದ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಜನರು ತಂಪು ನೀರು, ಮಜ್ಜಿಗೆ, ಎಳನೀರು, ಹಣ್ಣಿನ ರಸ, ನೀರಿನ ಅಂಶ ಹೆಚ್ಚಿರುವ ತರಕಾರಿ ಮತ್ತು ಹಣ್ಣು ಸೇವನೆ, ಬಿಸಿಲಿನಲ್ಲಿ ಓಡಾಡುವಾಗ ತಂಪು ಕನ್ನಡಕ, ಛತ್ರಿ, ಟವಲ್ ಬಳಕೆ, ಹವಾಮಾನದ ಮಾಹಿತಿಯಾಧಾರಿಸಿ ದೈನಂದಿನ ಚಟುವಟಿಕೆ ನಿರ್ವಹಣೆ, ಹಾಗೆಯೇ ಮಧ್ಯಾಹ್ನದ ವೇಳೆ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯುವುದು, ಇನ್ನು ಟೀ, ಕಾಫಿ, ಹೆಚ್ಚು ಸಕ್ಕರೆ ಅಂಶ ಹೊಂದಿರುವ ಪಾನೀಯಾ ಹಾಗೂ ಮದ್ಯಪಾನದಿಂದ ದೂರವಿರುವುದು ಸೇರಿ ಮುಂಜಾಗ್ರತಾ ಕ್ರಮ ಪಾಲಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.


*ಸೂರ್ಯಾಘಾತದಿಂದ ರಕ್ಷಣೆ
ಬಿಸಿ ಗಾಳಿಯ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಾಘಾತ (ಸನ್ ಸ್ಟ್ರೊಕ್/ರ್ಬನ್) ಆಗುತ್ತದೆ. ಇದಕ್ಕೆ ತುತ್ತಾಗಿ ಅಸ್ವಸ್ಥಗೊಂಡ ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಕುಡಿಯಲು ಆಗಾಗ್ಗೆ ನೀರನ್ನು ಕೊಡಬೇಕು. ವ್ಯಕ್ತಿಯು ಚೇತರಿಸಿಕೊಂಡ ನಂತರ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ನೀಡಬೇಕು. ಸಮಸ್ಯೆ ತೀವ್ರವಾದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net