

ಹೊಸಪೇಟೆ: ಮೂಲಸೌಕರ್ಯಗಳ ಕೊರತೆಯಿಂದ ಹಂಪಿ ಪ್ರವಾಸ ಬಲು ಪ್ರಯಾಸ ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿಯಲ್ಲಿ ಪ್ರಕಟವಾದ ವಿಶೇಷ ವರದಿಗೆ ರಾಜ್ಯದ ಮುಖ್ಯಮಂತ್ರಿ ಕಚೇರಿಯಿಂದ ಭಾರಿ ಸ್ಪಂದನೆ ಸಿಕ್ಕಿದ್ದು, ಹಂಪಿಯಲ್ಲಿ ಸೌಕರ್ಯಕ್ಕಾಗಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ನೇತೃತ್ವದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು.
ಅ.14 ಮಂಗಳವಾರ ಪ್ರಕಟಿಸಿದ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ವಾಸ್ತವಾಂಶ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಹವಾಮ, ಧಾರ್ಮಿಕ ಧತ್ತಿ ಇಲಾಖೆ, ಕಮಲಾಪುರ ಪುರಸಭೆ ಹಂಪಿ, ಬುಕ್ಕಸಾಗರ ಸೇರಿದಂತೆ ಇತರೆ ಇಲಾಖೆಗಳ ಸಭೆ ನಡೆಸಿ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಹಂಪಿಯ ಪ್ರಮುಖ ಪ್ರದೇಶಗಳಲ್ಲಿ ತಗ್ಗು ಗುಂಡಿಗಳನ್ನು ಮುಚ್ಚುವುದು, ಕುಡಿವ ನೀರಿನ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಕಂಬಗಳಿಗೆ ಲೈಟ್, ದುರಸ್ಥಿತಿಯಲ್ಲಿರುವ ಸ್ಮಾರಕಗಳ ಅಭಿವೃದ್ಧಿ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸುವುದು ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.