ಮತ್ತೆ ಅಪಾಯಮಟ್ಟ ಮೀರಿ ಹರಿದ ತುಂಗಭದ್ರಾ

13 MANJU 01
Published on

ಹೊಸಪೇಟೆ : ತುಂಗಭದ್ರಾ ಜಲಾಶಯದ ಜಲಾಯನಯ ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ನದಿ ಅಪಾರಮಟ್ಟ ಮೀರಿ ಹರಿಯುತ್ತಿದೆ. ಜಲಾಶಯದಿಂದ 82 ಸಾವಿರ ಕ್ಯೂಸೆಕ್ ಗೂ ಅಧಿಕ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ನದಿ ಅಂಚಿನಲ್ಲಿರುವ ಐತಿಹಾಸಿಕ ಹಂಪಿ ಸ್ಮಾರಕಗಳು ನೀರಿನಲ್ಲಿ ಮುಳಗಡೆಯಾಗಿವೆ. ಇನ್ನೂ ನದಿ ಪತ್ರದ ಜನರಿಗೆ ಟಿಬಿಬಿ ಎಚ್ಚರಿಕೆ ನೀಡಿದೆ.

ತುಂಗಭದ್ರಾ ಜಲಾಶಯದ 20 ಗೇಟ್ ಮೂಲಕ ನದಿಗೆ ಹಾಗೂ ಕಾಲುವೆಗಳಿಗೆ 82 ಸಾವಿರ ಕ್ಯೂಸೆಕ್ ಗೂ ಅಧಿಕ ನೀರನ್ನು ಹರಿ ಬಿಡಲಾಗಿದೆ. ಒಳಹರಿವಿನಲ್ಲಿ ಏರಿಕೆಯಾಗಿದ್ದರಿಂದ 20 ಗೇಟ್‌ಗಳನ್ನು ತಲಾ 2.5 ಅಡಿ ಎತ್ತರಿಸಿ 78190 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಜತೆಗೆ ಕಾಲುವೆಗಳಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗ್ಗೆ 8 ಗಂಟೆ ವರದಿ ಪ್ರಕಾರ 88540 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಳಹರಿವಿನ ಪ್ರಮಾಣ ಜಾಸ್ತಿಯಾದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ನದಿಗೆ ಬೊಟ್ ಹಾಕದಂತೆ ಹಾಗೂ ಮೀನುಗಾರರನ್ನು ಇಳಿಯದಂತೆ ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ಮುಳುಗಿದ ಸ್ಮಾರಕಗಳು

ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇಗುಲದ ಹತ್ತಿರ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ನದಿತಟದ ವೈದಿಕ ಮಂಟಪ, ಜನಿವಾರ ಮಂಟಪ, ಅಡಕಲ ಗುಂಡು, ಪುರಂದರ ಮಂಟಪ, ಕೋಟಿ ಲಿಂಗ ನದಿಯಲ್ಲಿ ಮುಳಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮಸ್ವಾಮಿ ಹಾಗೂ ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗ ಸಂಪರ್ಕ ಕಡಿತವಾಗಿದೆ. ಪ್ರವಾಸಿಗರು, ಎದುರು ಬಸವಣ್ಣ ಮಂಟದ ಬೆಟ್ಟದ ಕಾಲುದಾರಿ ಮೂಲಕ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ಸೇರಿದಂತೆ ಅಚ್ಯುತ ದೇಗುಲಗಳಿಗೆ ತೆರಳುತ್ತಿದ್ದಾರೆ. ನದಿ ಉಕ್ಕಿಹರಿಯುತ್ತಿರುವ ಹಿನ್ನೆಲೆಯಲ್ಲಿ ದೋಣಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಪೊಲೀಸರು ನಿಗಾ

ಹಂಪಿ ಭಾಗದಲ್ಲಿ ತುಂಗಭದ್ರಾ ನದಿ ಜೋರಾಗಿ ಹರಿಯುತ್ತಿರುವುದರಿಂದ ಬೋಟ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೊಪ್ಪಳದ ಆನೆಗೊಂದಿ ಹಾಗೂ ಹಂಪಿ ನಡುವೆ ಸಂಚರಿಸುತ್ತಿದ್ದ ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಮೀನುಗಾರರು ತೆಪ್ಪಹಾಕದಂತೆ ನಿರ್ಬಂಧಿಸಲಾಗಿದೆ. ಭಾರಿ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಹಿಸಲು ಪ್ರವಾಸಿಗರು ಹಾಗೂ ಭಕ್ತರು ತೆರಳದಂತೆ ಪೊಲೀಸರು ನಿಗಾವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net