

ಹೊಸಪೇಟೆ: ಕಳೆದೊಂದು ವಾರದಿಂದ ಕರ್ನಾಟಕ, ಆಂದ್ರ, ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಗೆ ಇನ್ನೂ 11 ಅಡಿ ಬಾಕಿಯಿದೆ.
ಕಳೆದ ಬಾರಿ ಪೂರಕ ಮಳೆಯಾಗದೇ ಜಲಾಶಯ ಸಂಪೂರ್ಣ ಭರ್ತಿಯಾಗಿರಲಿಲ್ಲ. ಈ ಬಾರಿ ಪೂರ್ವ ಮೂಂಗಾರು ಉತ್ತಮ ಮಳೆಯಾಗಿದ್ದರಿಂದ ತುಂಗಭದ್ರಾ ಜಲಾಶಯಕ್ಕೆ ಜೂ.01 ರಿಂದ 270 ಕ್ಯೂಸೆಕ್ ಒಳಹರಿವು ಆರಂಭವಾಯಿತು. 3.338 ಟಿಎಂಸಿ ನೀರಿತ್ತು. ಜು.01ರಂದು 11 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಾಯಿತು. 6.782 ಟಿಎಂಸಿ ನೀರು ಸಂಗ್ರವಾಗಿತ್ತು. ಜು.07 ರಂದು 50 ಸಾವಿರ ಕ್ಯೂಸೆಕ್ ಒಳ ಹರಿವು ದಾಖಲಾಗಿತ್ತು. ನಂತರ ಕೆಲ ದಿನ ಕಡಿಮೆಯಾಗಿದ್ದ ಒಳಹರಿವು ಗುರುವಾರ ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬಂತು. ಶನಿವಾರ 116040 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1267 ಕ್ಯೂಸೆಕ್ ಹೊರಹರಿವಿದೆ. ಜಲಾಶಯದ ಗರಿಷ್ಠ ಮಟ್ಟ 1,633 ಅಡಿಯಷ್ಟಿದ್ದು, 1621.75 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 11.25 ಅಡಿಯಷ್ಟು ಮಾತ್ರ ಬಾಕಿ ಇದೆ. 65.110 ಟಿಎಂಸಿ ನೀರು ಸಂಗ್ರಹವಾಗಿದೆ. ಎರಡು ದಿನದಲ್ಲಿ 18.308 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 12.574 ಟಿಎಂಸಿ ನೀರಿತ್ತು. ಕಳೆದ ಬಾರಿಗಿಂತ ಈ ಬಾರಿ 52.536 ಟಿಎಂಸಿ ನೀರು ಹೆಚ್ಚಿದೆ.
ಶನಿವಾರ 8 ಗಂಟೆ ವರದಿ ಪ್ರಕಾರ 116040 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕಳೆದ ಹತ್ತು ವರ್ಷಗಳ ಸರಾಸರಿಗೆ ಹೋಲಿಕೆ ಮಾಡಿದರೆ ಜಲಾಶಯದಲ್ಲಿ 47.120 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈಗ 65.110 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಮಟ್ಟ 1633.00 ಅಡಿ ಇದ್ದು, ಈಗ 1621.32 ಅಡಿಯವರೆಗೆ ನೀರು ಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಒಳ ಹರಿವು 1ಲಕ್ಷ 16 ಸಾವಿರ ಕ್ಯುಸೆಕ್‌ಗೆ ತಲುಪಿದ್ದು, ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಬಹುದು. ಹಾಗಾಗಿ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ತುಂಗಭದ್ರಾ ಮಂಡಳಿ ಆಯಾ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಮತ್ತು ಆಂಧ್ರಪ್ರದೇಶದ ಕರ್ನೂಲ, ಕಡಪ, ಅನಂತಪುರ ಮತ್ತು ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಈಗ ತುಂಗಭದ್ರಾ ಜಲಾಶಯದಿಂದ ಒಮ್ಮಲ್ಲೇ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟರೆ ನದಿಪಾತ್ರದ ಹಳ್ಳಿ, ಪಟ್ಟಣಗಳಿಗೆ ತೊಂದರೆಯಾಗಲಿದೆ. ಹಾಗಾಗಿ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ಈಗ ಅಲರ್ಟ್ ಸಂದೇಶವನ್ನು ತುಂಗಭದ್ರಾ ಮಂಡಳಿ ರವಾನಿಸಿದೆ.
ಟಿಬಿಡ್ಯಾಂಗೆ ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಶನಿವಾರ 1.16 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ನದಿ ಪತ್ರದ ಜನರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ