ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ನಗರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಂಬಂದಿಸಿದಂತೆ ರಾಜಕೀಯ ಮೇಲಾಟದಿಂದಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ ಎಂಬುದು ಕಬ್ಬು ಬೆಳೆಗಾರರ ದಶಕದ ಬೇಡಿಕೆಯಾಗಿದೆ. ಆದರೆ, ಕಾರ್ಖಾನೆ ನಿರ್ಮಾಣಕ್ಕೆ ಜಾಗ ಗುರುತಿಸುವಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ.
2014-15 ನೇ ಸಾಲಿನಲ್ಲಿ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ಈ ಕಾರ್ಖಾನೆ ಮುಚ್ಚಲು ಮಾಜಿಸಚಿವ ಆನಂದಸಿಂಗ್ ಕಾರಣ ಎಂಬ ಮಾತುಗಳು ಈಗಲೂ ಚರ್ಚೆಯ ಮುನ್ನೆಲೆಯಲ್ಲಿವೆ. ಬಳಿಕ ನಗರದ ಹೊರವಲಯದ ಜಂಬುನಾಥಹಳಿ ಬಳಿ 82 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ 2023ರ ಮಾರ್ಚ್‌ನಲ್ಲಿ ಬಿಜೆಪಿ ಸರ್ಕಾರದಿಂದ ಮಾಜಿ ಸಚಿವ ಆನಂದ ಸಿಂಗ್ ಪರವಾನಗಿ ಪಡೆದಿದ್ದರು. ಎಚ್. ಆರ್.ಗವಿಯಪ್ಪ ಶಾಸಕರಾದ ಬಳಿಕ ಜಂಬುನಾಥನಹಳ್ಳಿ ಬದಲಿಗೆ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಘಟ್ಟ ಪ್ರದೇಶದಲ್ಲಿ 77 ಎಕರೆ ಜಾಗ ಗುರುತಿಸಲಾಗಿದೆ. ಈ ಜಾಗದಲ್ಲೂ ಕಾರ್ಖಾನೆ ನಿರ್ಮಾಣಕ್ಕೆ ಹಲವು ಅಡೆ ತಡೆಗಳಿವೆ.
ಹೊಸಪೇಟೆ, ಕಮಲಾಪುರ, ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಒಟ್ಟು 3,732 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಕೊಟ್ಟೂರು ಹೊರತುಪಡಿಸಿ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಅಂದಾಜು 5 ರಿಂದ 6 ಲಕ್ಷ ಟನ್‌ವರೆಗೆ ಇಳುವರಿ ಬರುತ್ತದೆ. ಪ್ರತಿ ಟನ್ ಕಬ್ಬಿಗೆ 2950 ರೂ. ಇದೆ. ಕಟಾವು, ಸಾಗಣೆ ವೆಚ್ಚ ಕಳೆದು ಪ್ರತಿ ಟನ್‌ಗೆ ರೈತರಿಗೆ 1500 ರೂ. ರಿಂದ 1700 ರೂ. ವರೆಗೆ ಪಾವತಿಯಾಗುತ್ತದೆ.
ಹಂಪಿ ಬಳಿಯ ಕಾಳಘಟ್ಟದಲ್ಲಿ ನಿರ್ಮಾಣಕ್ಕೆ ಯತ್ನ
ಜಂಬುನಾಥಹಳ್ಳಿ ನಗರಕ್ಕೆ ಹೊಂದಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಗರ ಬೆಳೆದಂತೆ ಜನರಿಗೆ ಮಾರಕ ಆಗಲಿದೆ. ಇದರ ಬದಲಾಗಿ ಬೇರೆ ಕಡೆ ಸ್ಥಳ ಹುಡುಕಬೇಕು ಎಂದು ಹಲವು ಸಂಘ-ಸಂಸ್ಥೆಗಳ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ, ಇದೇ ಸ್ಥಳದಲ್ಲಿ ಹಂಪಿ ಶುಗರ್ಸ್ ಕಾರ್ಖಾನೆ ಆರಂಭಕ್ಕೆ ಭೂಮಿ ಪೂಜೆ ಕೂಡ ನಡೆದಿತ್ತು. 2023ರಲ್ಲಿ ಎಚ್.ಆರ್.ಗವಿಯಪ್ಪ ಶಾಸಕರಾದ ನಂತರ ಹಂಪಿಯಿಂದ ನಾಲ್ಕು ಕಿ.ಮೀ. ಅಂತರದಲ್ಲಿರುವ ಕಾಳಘಟ್ಟದಲ್ಲಿ ಜಾಗ ಗುರುತಿಸಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ, ಹಂಪಿ ನಿರ್ವಹಣಾ ಪ್ರಾಧಿಕಾರದಿಂದ ಅನುಮೋದನೆ ಸಿಗುವುದು ಕಷ್ಟವಾಗಿದೆ. ಹಂಪಿ ಸ್ಥಾಕರಗಳು ಯುನೆಸ್ಕೋ ಪಟ್ಟಿಗೆ ಸೇರಿರುವುದರಿಂದ ಅನುಮತಿ ಸಿಗುವುದು ಜಟಿಲವಾಗಿದೆ. ಹತ್ತಿರದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದು, ನೀರುನಾಯಿಗಳ ಸಂರಕ್ಷಣಾ ಸ್ಥಳವಾಗಿದೆ. ಪಾಪಿನಾಯಕನಹಳ್ಳಿ ಭಾಗದಲ್ಲಿ ದರೋಜಿ ಕರಡಿಧಾಮ ಹಾಗೂ ಅರಣ್ಯ ಪ್ರದೇಶ ಅವರಿಸಿಕೊಂಡಿದೆ. ಮರಿಯಮ್ಮನಹಳ್ಳಿ ಭಾಗದಲ್ಲಿ ಸ್ಥಳ ಇದ್ದರೂ, ಕಬ್ಬು ಬೆಳೆಗಾರರಿಗೆ ದೂರವಾಗಲಿದೆ. ಹೊಸಪೇಟೆ ಹಾಗೂ ಕಮಲಾಪುರ ಹೋಬಳಿಯಲ್ಲೇ ಕಾರ್ಖಾನೆ ಆರಂಭವಾಗಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.
ರೈತರು ಸಲ್ಲಿಸಿದ ಮನವಿಗಳಿಗೆ ಸ್ಪಂದನೆಯಿಲ್ಲ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆಯುವ ಈ ಭಾಗದ ರೈತರಿಗೆ ದೂರದ ಕಾರ್ಖಾನೆಗಳೇ ಈಗ ಆಸರೆಯಾಗಿವೆ. ಸರ್ಕಾರದಿಂದ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಒಂದು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಬೇಕೆಂದು ಸಿಎಂ, ಸಚಿವರು, ಅಧಿಕಾರಿಗಳಿಗೆ ರೈತರು ಆಗಾಗ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯವಾಗಿ ರೈತರನ್ನು ಬಳಸಿಕೊಳ್ಳಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುತ್ತಿಲ್ಲ ಎಂಬುದು ಕಬ್ಬು ಬೆಳೆಗಾರರ ಆಕ್ರೋಶದ ಮಾತುಗಳಾಗಿವೆ.
ಸಕ್ಕರೆ ಕಾರ್ಖಾನೆ ಹೊಸಪೇಟೆ ಭಾಗದ ರೈತರ ಪ್ರಮುಖ ಬೇಡಿಕೆಯಾಗಿದೆ. ಕಾಳಘಟ್ಟದಲ್ಲಿ ಜಾಗ ಗುರುತಿಸಲಾಗಿದೆ. ಸರ್ಕಾರದ ಅನುಮತಿ ಪಡೆದು ಕಾರ್ಖಾನೆ ನಿರ್ಮಾಣ ಮಾಡಲು ಸಿದ್ಧತೆ ನಡೆದಿದೆ.
| ಎಚ್.ಆರ್.ಗವಿಯಪ್ಪ ಶಾಸಕ, ವಿಜಯನಗರ