

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತಾಲೂಕಿನ ಕಾಳಘಟ್ಟದಲ್ಲಿ ಮುರಾರ್ಜಿ ವಸತಿ ಶಾಲೆಗಾಗಿ 2012ರಲ್ಲೇ 9.88 ಎಕರೆ ಜಾಗ ಮೀಸಲಿಡಲಾಗಿದೆ. ಶಾಲೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೂಡ ಬಂದಿದೆ. ಆದರೆ, ಈ ಜಾಗದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಆಸಕ್ತಿ ತೋರಿದ್ದಾರೆ. ಇದರಿಂದಾಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ತಡೆಯೊಡ್ಡಿದ್ದಾರೆ. ಶಾಸಕರ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
1955ರಲ್ಲಿ ಮನಸಾಲಿ ರಾಮಣ್ಣ ಅವರು ಶಾಲೆಗಾಗಿ ಜಮೀನು ದಾನ ನೀಡಿದ್ದರು. 2012ರಲ್ಲಿ ಮುರಾರ್ಜಿ ವಸತಿ ಶಾಲೆಗೆ ಜಾಗ ಮಂಜೂರು ಮಾಡಲಾಗಿದ್ದು, ಪಹಣಿಯಲ್ಲಿ ಕೂಡ ಹೆಸರು ಬದಲಾಗಿದೆ. ಶಾಲೆ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅಂದಾಜು ಎಂಟು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಏ.2ರಂದು ಶಾಸಕರಿಂದ ಭೂಮಿ ಪೂಜೆ ನಡೆಯಬೇಕಿದ್ದು, ರದ್ದು ಮಾಡಲಾಗಿದೆ. ಶಾಸಕ ಎಚ್.ಆರ್.ಗವಿಯಪ್ಪ ನಾಗೇನಹಳ್ಳಿ, ಕಾಳಘಟ್ಟ ಹಾಗೂ ಬಸವನದುರ್ಗ ಗ್ರಾಮಸ್ಥರ ಸಭೆ ನಡೆಸಿ ನಿಮಗೆ ವಸತಿ ಶಾಲೆ ಬೇಕಾ ಅಥವಾ ಸಕ್ಕರೆ ಫ್ಯಾಕ್ಟರಿ ಬೇಕಾ ಎಂದು ಪ್ರಶ್ನಿಸಿದ್ದಾರೆ. ಶಾಲೆಗಾಗಿ ದಾನಿ ಜಮೀನು ಮಾಡಿದ್ದಾರೆ. ಈ ಜಮೀನನ್ನು ಸಕ್ಕರೆ ಕಾರ್ಖಾನೆಗೆ ಬಳಸಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಜಾಗವನ್ನು ದಾನಿ ಶಾಲೆಗಾಗಿ ನೀಡಿದ್ದು, ಶಾಲೆ ಹೆಸರಿನಲ್ಲಿ ಮೀಸಲಿಡಲಾಗಿದೆ.
ಮುರಾರ್ಜಿ ವಸತಿ ಶಾಲೆ 2010ರಲ್ಲಿ ಆರಂಭವಾಗಿದ್ದು, ಇಲ್ಲಿವರೆಗೆ ಮೂರಾಲ್ಕು ಬಾಡಿಗೆ ಕಟ್ಟಡ ಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಸದ್ಯ ನಗರದ ಸಂಕ್ಲಾಪುರ ಬಳಿ ಶಾಲೆ ಇದೆ. ಕಾಳಘಟ್ಟ ಗ್ರಾಮದ ಹೊರಭಾಗದಲ್ಲಿ 2012ರಲ್ಲಿ 9.88 ಎಕರೆ ಜಾಗ ಶಾಲೆಗೆ ಮೀಸಲಿಡಲಾಗಿದೆ. ವರ್ಷಗಳೇ ಕಳೆದರೂ ವಸತಿ ಶಾಲೆ ಕಟ್ಟಡ ನಿರ್ಮಾಣವಾಗುತ್ತಿಲ್ಲ. 15 ವರ್ಷಗಳ ನಂತರ ಶಾಲೆ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಆದರೆ, ಈ ವಿಚಾರದಲ್ಲಿ ಶಾಸಕ ರಾಜಕಾರಣ ಮಾಡುತ್ತಿದ್ದಾರೆ. ಜಾಗದಲ್ಲಿ ಮುರಾರ್ಜಿ ವಸತಿ ಶಾಲೆ ಕಟ್ಟಡ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
ಕಾಳಘಟ್ಟ ಗ್ರಾಮದ ಬಳಿ 9.88 2 ಜಾಗ ಶಾಲೆಗೆ ಮೀಸಲಿಟ್ಟಿದ್ದರೆ ಶಾಲೆ ನಿರ್ಮಿಸ ಲಾಗುವುದು. ಸರ್ಕಾರಿ ಜಾಗವಿದ್ದರೆ ಸರ್ಕಾರ ತೀರ್ಮಾನ ಮಾಡಲಿದೆ. ದಾಖಲೆ ಪರಿಶೀಲಿಸಿದ ನಂತರ ಕ್ರಮಕೈಗೊಳ್ಳಲಾಗುವುದು. ಎಂ.ಎಸ್.ದಿವಾಕರ, ಡಿಸಿ, ವಿಜಯನಗರ ಮುರಾರ್ಜಿ ವಸತಿ ಶಾಲೆ 15 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿದೆ. ಶಾಲೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಶಾಲೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಬೇಕಿದ್ದ ಶಾಸಕರೇ ಈಗ ಶಾಲೆ ಬೇಕಾ ಅಥವಾ ಕಾರ್ಖಾನೆ ಬೇಕಾ ಎಂದು ಪ್ರಶ್ನೆ ಮಾಡುವುದು ಸರಿಯಲ್ಲ. ಎಂ.ದುರುಗಪ್ಪ ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷ, ಹೊಸಪೇಟೆ