ಪೊಲೀಸರ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

10 MANJU 03
Published on

ಹೊಸಪೇಟೆ: ಕೊಲೆ ಆರೋಪಿ ಹಲ್ಲೆ ನಡೆಸಿದ್ದರಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಪ್ರತಿಯಾಗಿ ತನಿಖಾಧಿಕಾರಿ ಆತನ ಮೇಲೆ ಗುಂಡೇಟು ಹಾರಿಸಿ ಬಂಧಿಸಿದ ಘಟನೆ ಬುಧವಾರ ರಾತ್ರಿ ನಗರದಲ್ಲಿ ನಡೆದಿದೆ.

ಇಲ್ಲಿನ ಜಂಬುನಾಥ ರಸ್ತೆ ಅಂಬೇಡ್ಕರ್ ನಗರದ ನಾಲ್ಕನೇ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲನ್ನು ಎತ್ತಿಹಾಕಿ ಹೊನ್ನೂರ (28) ಎಂಬಾತನನ್ನು ಅದೇ ಬಡಾವಣೆಯ ಕಾಳಿ (30) ಕೊಲೆ ಮಾಡಿದ್ದಾನೆ. ಕೊಲೆ ಆರೋಪಿಯನ್ನು ಬುಧವಾರ ಮಧ್ಯರಾತ್ರಿ ಬಂಧಿಸಿ, ಬೆಳಗಿನ ಜಾವ ಪಂಚನಾಮೆ ನಡೆಸುತ್ತಿದ್ದಾಗ ಕಾಳಿ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಸಿಬ್ಬಂದಿ ಎಚ್‌ಸಿ ಲಿಂಗರಾಜ ಹಾಗೂ ಪಿಸಿ ಕೊಟ್ರೇಶ್‌ಗೆ ಗಾಯಗಳಾಗಿವೆ. ರಕ್ಷಣೆಗಾಗಿ ತನಿಖಾಧಿಕಾರಿ ಹುಲುಗಪ್ಪ ಆರೋಪಿಯ ಬಲಗಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಕೊಲೆ ಆರೋಪಿ ಹಾಗೂ ಹಲ್ಲೆಗೊಳಗಾದ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2015ರಲ್ಲಿ ಅನೈತಿಕ ಸಂಬಂಧ ಕೊಲೆ ಪ್ರಕರಣದಲ್ಲಿ ಕಾಳಿ ಜೈಲು ಪಾಲಾಗಿದ್ದ. ಈತನ ವಿರುದ್ಧ ಹೊನ್ನೂರ ಸಾಕ್ಷಿ ಹೇಳಿದ್ದ. ಈ ದ್ವೇಷದ ಹಿನ್ನೆಲೆ 2021ರಲ್ಲಿ ಹೊನ್ನೂರನ ಮೇಲೆ ಕಾಳಿಯಿಂದ ಕೊಲೆ ಯತ್ನ ನಡೆದಿತ್ತು. ಆಗಲೂ ಜೈಲು ವಾಸ ಅನುಭವಿಸಿದ್ದ. ನಂತರದಲ್ಲಿ ಹೊನ್ನೂರ ದಾವಣಗೆರೆಯಲ್ಲಿ ವಾಸವಿದ್ದ. ಈಗ ನಗರದಲ್ಲಿ ಜಂಬುನಾಥೇಶ್ವರ ರಥೋತ್ಸವಕ್ಕೆಂದು ನಗರಕ್ಕೆ ಬಂದಿದ್ದ ಹೊನ್ನೂರನ ಮೇಲೆ ಮತ್ತೆ ಬುಧವಾರ ರಾತ್ರಿ ಕಾಳಿ ಹಲವು ಬಾರಿ ಚಾಕುವಿನಿಂದ ಚುಚ್ಚಿದ್ದಲ್ಲದೆ ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net