

| ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೊಳ್ಳೆ ಕಾಟಕ್ಕೆ ರೋಸಿ ಹೋಗಿರುವ ಜನರು ಸಂಜೆಯಾಗುತ್ತಿದ್ದಂತೆಯೇ ಮನೆ ಮುಂದೆ ಹೊಗೆ ಹಾಕುವುದನ್ನು ರೂಢಿಸಿಕೊಂಡಿದ್ದಾರೆ.
ಪ್ರತಿ ಊರು, ವರ‍್ಡ್‌ಗಳಲ್ಲಿ ಹೆಚ್ಚುತ್ತಿರುವ ಸೊಳ್ಳೆಗಳಿಂದ ಜನ ನಿತ್ಯ ಜಾಗರಣೆ ಮಾಡುವಂತಾಗಿದೆ. ತಾಪಮಾನ ಹೆಚ್ಚುತ್ತಿರುವ ಕಾರಣ ಜನಸಾಮಾನ್ಯರು ಮನೆಯಂಗಳ ಅಥವಾ ಮಹಡಿ ಮೇಲೆ ಮಲಗುವುದು ಸಾಮಾನ್ಯ. ಆದರೆ, ಸೊಳ್ಳೆಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬಿರುವ ಚರಂಡಿಗಳು, ಸರ‍್ಪಕವಾಗಿ ಹರಿಯದ ತ್ಯಾಜ್ಯ ನೀರು ಹಾಗೂ ಅಶುಚಿತ್ವದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಕಾಯಿಲೆ ಹರಡುವ ಭೀತಿ ಜನರಲ್ಲಿ ಮೂಡಿದೆ.
ಜನರು ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ ಕಟ್ಟಿಕೊಳ್ಳುವುದು, ಸೊಳ್ಳೆ ಸಾಯಿಸುವ ಬ್ಯಾಟ್ ಬಳಸುವುದು, ಔಷಧಿ ಲೇಪನ ಮಾಡಿಕೊಳ್ಳುವುದು ಸೇರಿ ನಾನಾ ಉಪಾಯಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಜಾನುವಾರುಗಳ ಮೂಕ ವೇದನೆ ಹೇಳತೀರದು. ಭತ್ತದ ಹುಲ್ಲು, ಬೇವಿನ ಎಲೆಯಿಂದ ಹಾಕುವ ಹೊಗೆ ಕೆಲಹೊತ್ತು ಇರುತ್ತದೆ. ಆಗ ನಿಯಂತ್ರಣಗೊಳ್ಳುವ ಸೊಳ್ಳೆಗಳು ನಂತರ ಹಿಂಡಾಗಿ ಮತ್ತೆ ದಾಂಗುಡಿ ಇಡುತ್ತವೆ. ಹೀಗಾಗಿ ರೈತರು ಜಾನುವಾರುಗಳಿಗೂ ಸೊಳ್ಳೆ ಪರದೆ ಕಟ್ಟಿ ಆರೈಕೆ ಮಾಡುತ್ತಿದ್ದಾರೆ.
ಸೊಳ್ಳೆಗಳ ನಿಯಂತ್ರಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳು ಕೂಡ ಇತ್ತ ಗಮನ ಹರಿಸುತ್ತಿಲ್ಲ. ವರ‍್ಡ್‌ಗಳಲ್ಲಿರುವ ಚರಂಡಿಗಳಲ್ಲಿನ ತ್ಯಾಜ್ಯ ನಿಂತಲ್ಲೇ ನಿಂತಿದೆ. ಹೀಗಾಗಿ ಸೊಳ್ಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಬೇಕು ಮತ್ತು ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸಿ. ನೀರು ನಿಲ್ಲದಂತೆ ಮಾಡಬೇಕು ಎಂದು ಸರ‍್ವಜನಿಕರು ಒತ್ತಾಯಿಸಿದ್ದಾರೆ
ಸಂಗ್ರಹವಾಗುವ ಕಸದ ವಿಲೇವಾರಿಗಾಗಿ ಸ್ಥಳೀಯ ಸಂಸ್ಥೆಗಳಿಂದ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಕಸದ ಬುಟ್ಟಿ ಸೇರಿದಂತೆ ವಾಹನಗಳಲ್ಲಿ ಸಾಗಣೆ ಆಗಬೇಕಿದ್ದ ಕಸ ಚರಂಡಿ ಪಾಲಾಗುತ್ತಿದೆ. ಇದರಿಂದಲೇ ಸಮಸ್ಯೆ ಉಲ್ಬಣವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಸ ಸಂಗ್ರಹಿಸಲು ದೊಡ್ಡ ಕಂಟೇನರ್‌ಗಳನ್ನು ಇಡಲಾಗಿತ್ತು. ಆದರೆ, ಅದರಲ್ಲಿಯೇ ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಬಹುತೇಕ ಕಂಟೇನರ್ ಗಳು ಹಾಳಾಗಿವೆ. ಇನ್ನು ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಕಸ ಸಂಗ್ರಹಕ್ಕಾಗಿ ಸಣ್ಣ ಡಬ್ಬಿಗಳನ್ನು ಇಡಲಾಗಿತ್ತು. ಅವು ಕೂಡ ಕಸ ಆಯುವವರ ಪಾಲಾಗಿವೆ. ಹೀಗಾಗಿ ಕಸವು ರಸ್ತೆಯ ಬದಿಗೆ ಬಿದ್ದು, ಚರಂಡಿ ಸೇರುವಂತಾಗಿದೆ ಎಂದು ಸರ‍್ವಜನಿಕರು ದೂರುತ್ತಿದ್ದಾರೆ.
ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಇನ್ನು ಪಿಯುಸಿ, ಪದವಿ ವಿದ್ಯಾ ರ‍್ಥಿಗಳ ಪರೀಕ್ಷೆಗಳೂ ಸಮೀಪಿಸುತ್ತಿದೆ. ಹೀಗಿರುವಾಗ ವಿದ್ಯರ‍್ಥಿಗಳು ಓದುವ ಕಾಯಕ ಬಿಟ್ಟು ಸೊಳ್ಳೆಗಳನ್ನು ಓಡಿಸುವುದರಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಗಿದೆ. ಇದರಿಂದ ಅಭ್ಯಾಸದ ಕಡೆಗೆ ಗಮನ ಕೇಂದ್ರಿ ಕರಿಸುವುದು ಸಾಧ್ಯವಾಗುತ್ತಿಲ್ಲ ಎಂಬುದು ವಿದ್ಯರ‍್ಥಿಗಳ ಅಳಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದ್ದು, ಜನರನ್ನು ಡೆಂಘಿ ಜ್ವರ ಕಾಡಲು ಆರಂಭಿಸಿದೆ. ಕಳೆದ ಜನವರಿಯಿಂದ ಇದುವರೆಗೆ 10 ಡೆಂಘ ಪ್ರಕರಣ ಗಳು ಬೆಳಕಿಗೆ ಬಂದಿವೆ. ಹವಾಮಾನ ಬದಲಾವಣೆಯಿಂದಾಗಿ ಜಿಲ್ಲೆಯಾದ್ಯಂತ ಜನರಿಗೆ ವೈರಲ್ ಜ್ವರವೂ ಬಾಧಿಸುತ್ತಿದೆ. ಸೊಳ್ಳೆಗಳ ಹಾವಳಿಯಿಂದ ಡೆಂಘ ಜ್ವರ ಇರಬಹುದೇನೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ಹಾಗಾಗಿ, ಆಸ್ಪತ್ರೆಗಳತ್ತ ಜನರು ದೌಡಾಯಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು ಸೊಳ್ಳೆ ನಿಯಂತ್ರಣ ಮಾಡದಿದ್ದರೆ, ಡೆಂಫೆ ಉಲ್ಬಣ ಆಗುವ ಸಾಧ್ಯತೆಯಿದೆ.
ಸೊಳ್ಳೆಗಳ ಕಾಟದ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಫಾಗಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸ್ವಚ್ಛತೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ ವಿದ್ಯಾಭ್ಯಾಸ ಮಾಡಲು ಆಗದಷ್ಟು ಸೊಳ್ಳೆಗಳ ಕಾಟ ಇದೆ. ಲೋಬಾನ, ಊದುಬತ್ತಿ ಹಚ್ಚಿದ್ರೂ ಸೊಳ್ಳೆ ಕಾಟ ತಪ್ಪುತ್ತಿಲ್ಲ. | ತಾಯಮ್ಮ ವಿದ್ಯರ‍್ಥಿನಿ, ಮಲಪನಗುಡಿ