

ಹೂವಿನಹಡಗಲಿ : ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಹೊಳಲು ಗ್ರಾಮದ ಮಂಜುನಾಥ ಶೇಜವಾಡಕರ್ (58) ಅವರಿಗೆ ಅಪಹರಿಸಿ 5 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಂಜುನಾಥ ಅವರು ಎಂದಿನಂತೆ ಬೆಳಿಗ್ಗೆ 5.30 ಕ್ಕೆ ಗ್ರಾಮದ ಮೈಲಾರ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗಿದ್ದಾರೆ. ಮನೆಗೆ ಬರುವುದು ತಡವಾಗಿದ್ದರಿಂದ ಕುಟುಂಬಸ್ತರು ಅಕ್ಕ ಪಕ್ಕ ಹುಡುಕಾಡಿದ್ದಾರೆ. ಅದೇ ವೇಳೆ ಮಂಜುನಾಥ ಅವರ ಮೊಬೈಲ್ ನಿಂದ ಅಪಹರಣಕಾರರು ಮಂಜುನಾಥ ಸಹೋದರಿ ದಾವಣಗೆರೆಯ ವೈದ್ಯ ಡಾ.ಮಂಜುಳಾ ಇವರಿಗೆ ವಾಟ್ಸ್ಪ್ ಕಾಲ್‌ಮಾಡಿದ್ದಾರೆ. ಮಂಜುನಾಥ ಅವರು ನನ್ನನ್ನು ಯಾರೋ ಕಾರಲ್ಲಿ ಅಪಹರಣ ಮಾಡಿ ಕಟ್ಟಿಹಾಕಿದ್ದಾರೆ. 5 ಕೋಟಿ ರೂ. ಹಣ ಕೊಡಬೇಕೆಂದು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಅಪಹರಣಕಾರ ಮಾತನಾಡಿ, ಬೇಗನೆ ಹಣ ನೀಡಿ. ನಮಗೂ ಇವರಿಗೂ ಯಾವುದೇ ವಯಕ್ತಿಕ ದ್ವೇಷ ಇಲ್ಲಾ. ನಮಗೆ ಹಣ ಬೇಕು ಅಷ್ಟೆ ಎಂದಿದ್ದಾರೆ. ಅದಕ್ಕೆ ಡಾ.ಮಂಜುಳಾ ಇವರು ಪ್ರತಿಕ್ರಿಯಿಸಿ ಅಷ್ಟೊಂದು ಹಣ ನಮ್ಮಿಂದಾಗಲ್ಲ ಒಂದು ಲಕ್ಷ ಮಾತ್ರ ನೀಡಲು ಸಾಧ್ಯ ಎಂದಿದ್ದಾರೆ. ನಾವು ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ಸಹೋದರನ ಬಾಡಿ ಕೂಡಾ ಸಿಗುವುದಿಲ್ಲ ಎಂದು ಹೆದರಿಸಿದ್ದಾರೆ.
ಈ ಸಂಭಾಷಣೆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಷಯ ತಿಳಿದ ತಕ್ಷಣ ಹಿರೇಹಡಗಲಿ ಪಿಎಸ್‌ಐ ಭರತ್ ಪ್ರಕಾಶ, ಸಿಪಿಐ ದೀಪಕ್ ಭೂಸರೆಡ್ಡಿ ಬೇಟಿ ನೀಡಿ ವಿಶೇಷ ತಂಡ ರಚನೆ ಮಾಡುವ ಮೂಲಕ ತನಿಖೆ ನಡೆಸಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.