

ಹೊಸಪೇಟೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಯಾವ ಸ್ಥಾನ ಕೂಡ ಖಾಲಿ ಇಲ್ಲಾ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಹಂಪಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಎಂ ವಿಚಾರ ಊಹಾಪೋಹಗಳಿಗೆ ಕಿವಿಗೊಡಬಾರದು. ಖಾಲಿ ಇದ್ದರೆ ತಾನೇ ಚರ್ಚೆ ಆಗೋದು. ಸಿಎಂ ಸಿದ್ದರಾಮಯ್ಯ ಖುರ್ಚಿ ಮುಟ್ಟೋಕೆ ಸಾಧ್ಯ ಏನರೀ. ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗತ್ತಾರೆ. ನಾವು ಟಗರು ಅಂತಿವಿ. ಆದರೆ, ಅವರು ಅದೊಂಥರ ಬೆಂಕಿ ಅದು. ಬೆಂಕಿ ಮುಟ್ಟಿದರೆ ಸುಟ್ಟೋಗತಾರೆ ಎಂದರು.
ನಮ್ಮ ಪಕ್ಷ ಹೈಕಮಾಂಡ್ ಪಕ್ಷವಾಗಿದೆ. ಹೈ ಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಸಿದ್ದರಾಮಯ್ಯನವರು ಸಿಎಂ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ, ಸಿಎಂ ಸಿದ್ದರಾಮಯ್ಯ ಇದ್ದಾರೆ. ಅವರನ್ನು ಬದಲಾವಣೆ ಮಾಡಬೇಕು ಅಂತ ನಿರ್ಧಾರ ಮಾಡಿದರೆ, ನಾವು ಅಭಿಪ್ರಾಯ ತಿಳಿಸಬಹುದು. ನಮ್ಮ ಪಕ್ಷದವರು ಯಾರೂ ಕೂಡ ಸಿದ್ದರಾಮಯ್ಯ ಬದಲಾವಣೆ ಅಂತ ಹೇಳಿಲ್ಲಾ ಎಂದರು.
ಎಲ್ಲಾ ಸಮಾಜಕ್ಕೂ ಸಿಎಂ ಆಗಬೇಕು ಅಂತ ಆಸೆ ಇರುತ್ತದೆ. ದಲಿತ, ಅಲ್ಪಸಂಖ್ಯಾತ, ಎಸ್ಟಿ, ಲಿಂಗಾಯತ ಸಮುದಾಯ ಎಲ್ಲರೂ ಸಿಎಂ ಆಗಬೇಕು ಅಂತಾರೆ. ತೀರ್ಮಾನ ಹೈ ಕಮಾಂಡ್‌ಗೆ ಬಿಟ್ಟಿದ್ದು. ಸಚಿವ ಪರಮೇಶ್ವರ ರಾಜೀನಾಮೆ ವಿಚಾರ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ಆದೇಶಕ್ಕೆ ನಾವು ಬದ್ಧ. ಸಿದ್ದರಾಮಯ್ಯ ಟಗರು, ಬೆಂಕಿ ಇದ್ದಂತೆ ಎಂದರು.