ಮೂವರು ಗಣ್ಯರಿಗೆ ನಾಡೋಜ ಪ್ರದಾನ

04 MANJU 03
Published on

ಹೊಸಪೇಟೆ: ಕನ್ನಡ ವಿವಿಯ 33ನೇ ನುಡಿಹಬ್ಬ (ಘಟಿಕೋತ್ಸವ) ಪ್ರಯುಕ್ತ ವಿದ್ಯಾರಣ್ಯ ಕ್ಯಾಂಪಸ್ ನ ನವರಂಗ ಬಯಲು ರಂಗ ಮಂಟಪದಲ್ಲಿ ಶುಕ್ರವಾರ ರಾಜ್ಯದ ಮೂವರು ಗಣ್ಯರಾದ ಶಿವರಾಜ್ ವಿ.ಪಾಟೀಲ್, ಎಂ.ವೆಂಕಟೇಶ ಕುಮಾರ, ಸಾಹಿತಿ ಕುಂ.ವೀರಭದ್ರಪ್ಪಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡೋಜ ಗೌರವ ಪದವಿ ನೀಡಿ ಗೌರವಿಸಿದರು.

ನ್ಯಾಯವಾದಿಗಳಾಗಿ ತಮ್ಮ ಕಾನೂನಿನ ಪಾಂಡಿತ್ಯ ಹಾಗೂ ವಾಕ್‌ಚಾತುರ್ಯದ ಮೂಲಕ ಗಮನ ಸೆಳೆದ ಶಿವರಾಜ್ ವಿ.ಪಾಟೀಲ್, ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಪಂಡಿತ್ ವೆಂಕಟೇಶ ಕುಮಾರ್, ಸಾಹಿತ್ಯ ಲೋಕದಲ್ಲಿ ‘ಕುಂವೀ’ ಎಂಬ ಹೆಸರಿನಿಂದಲೇ ಚಿರಪರಿಚಿತರಾದ ಕುಂ.ವೀರಭದ್ರಪ್ಪ ಅವರು ನಾಡೋಜ ಗೌರವ ಪದವಿ ಪಡೆದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಷ್ಟ್ರ ಕವಿ ಕುವೆಂಪು, ಸಿದ್ದವನಹಳ್ಳಿ ನಿಜಲಿಂಗಪ್ಪ, ಗಂಗೂಬಾಯಿ ಹಾನಗಲ್, ಡಾ. ಪಾಟೀಲ ಪುಟ್ಟಪ್ಪ ಸೇರಿದಂತೆ ಇಲ್ಲಿಯವರೆಗೆ 98 ಗಣ್ಯರಿಗೆ ನಾಡೋಜ ಗೌರವ ಪದವಿ ನೀಡಿ ಗೌರವಿಸಿದೆ.

ಈ ಬಾರಿಯ ಮೂರು ನಾಡೋಜ ಸೇರಿದಂತೆ 7 ವಿದ್ಯಾರ್ಥಿಗಳಿಗೆ ಡಿ.ಲಿಟ್.ಪದವಿ, 189 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿ, 90 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಇದರಲ್ಲಿ ವಿದ್ಯಾರ್ಥಿನಿಯರದೇ ಮೇಲುಗೈ ಇದೆ.

ತುಮಕುರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ಘಟಿಕೋತ್ಸವ ಭಾಷಣ ಮಾತನಾಡಿದರು. ವಿವಿಯ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net