

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹರಿಬಿಟ್ಟ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯಲ್ಲಿ ಅಪಾರಮಟ್ಟ ಮೀರಿ ಹರಿಯುತ್ತಿದ್ದು, ನದಿ ಅಂಚಿನಲ್ಲಿರುವ ಸ್ಮಾರಕಗಳು ಕಳೆದ ಒಂದು ವಾರದಿಂದ ಜಲದಿಗ್ಬಂದನಕ್ಕೆ ಒಳಗಾಗಿವೆ.
ಮಲೆನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆಯ ಆರ್ಭಟ ಜೋರಾಗಿದೆ. ಕೆಲ ಜಿಲ್ಲೆಯಲ್ಲಿ ಅಂತು ಸಾರ್ವಜನಿಕರು ಮನೆಬಿಟ್ಟು ಹೊರ ಬರದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ತುಂಗಭದ್ರಾ ಜಲಾಶಯ ಅವದಿ ಮುನ್ನ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ದಿನಕ್ಕೆ ಒಂದು ಲಕ್ಷ ದಿಂದ 2 ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿಸಲಾಗುತ್ತಿದೆ. ಕಳೆದ ಒಂದುವಾರದಿAದ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇಗುಲದ ಹತ್ತಿರ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ನದಿತಟದ ವೈದಿಕ ಮಂಟಪ, ಜನಿವಾರ ಮಂಟಪ, ಪುರಂದರ ಮಂಟಪ, ಕೋಟಿ ಲಿಂಗ ನದಿಯಲ್ಲಿ 1.5 ಲಕ್ಷ ಕ್ಯೂಸೆಕ್ ನೀರಿಗೆ ಮುಳಗಡೆಯಾಗಿವೆ. ಸೀತೆ ಸರಗು ಹಾಗೂ ಸುಗ್ರಿವ ಗುಹೆಯಿಂದ ನದಿ ನೀರು ಹರಿಯುತ್ತಿದೆ. ಚಕ್ರತೀರ್ಥ ಕೋದಂಡರಾಮಸ್ವಾಮಿ ಹಾಗೂ ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗ ಸಂಪರ್ಕ ಕಡಿತವಾಗಿದ್ದು, ಎದುರು ಬಸವಣ್ಣ ಮಂಟದ ಬೆಟ್ಟದ ಕಾಲುದಾರಿ ಮೂಲಕ ತೆರಳುತ್ತಿದ್ದಾರೆ.
ತುಂಗ ಜಲಾಶಯದಿಂದ 77 ಸಾವಿರ ಕ್ಯೂಸೆಕ್ ಗೂ ಅಧಿಕ ಹಾಗೂ ಭದ್ರಾ ಜಲಾಶಯದಿಂದ 63 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಹರಿಸಲಾಗುತ್ತುದೆ. ಹಾಗೂ ವರದ ನದಿಯಿಂದ ಕೂಡ ಅಷ್ಟೇ ಪ್ರಮಾಣದ ನೀರು ಹರಿದು ಬರುತ್ತಿದೆ. ಆದ್ದರಿಂದ ತುಂಗಭದ್ರಾ ಜಲಾಶಯದಿಂದ 1.79 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಜಲಾಶಯದ 28 ಗೇಟ್ 4 ಅಡಿ, 5 ಗೇಟ್ ಒಂದೂವರೆ ಎತ್ತರಿಸಿ ನದಿಗೆ ಹಾಗೂ ಕಾಲೂವೆಗಳ ಮೂಲಕ ಅಂದಾಜು ಎರಡು ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹಂಪಿಯ ಕೋದಂಡ ರಾಮಸ್ವಾಮಿ ದೇಗುಲದ ಗರ್ಭಗುಡಿಯ ಮೆಟ್ಟಿಲ ವರೆಗೆ ಹಾಗೂ ಸೀತೆ ಸೆರಗು-ಸುಗ್ರೀವ ಗುಹೆ ಮೂಲಕ ನದಿ ನೀರು ರಭಸವಾಗಿ ಹರಿಯುತ್ತಿದೆ. 1633 ಅಡಿಯ ಜಲಾಶಯದಲ್ಲಿ 1630.92 ಅಡಿಗೆ 97.501 ಟಿಎಂಸಿ ನೀರು ಸಂಗ್ರಹವಾಗಿದೆ. 1.96 ಲಕ್ಷ ಕ್ಯೂಸೆಕ್ ಒಳಹರಿವಿದೆ. 1.70 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಹರಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ 1.96 ಲಕ್ಷ ಕ್ಯೂಸೆಕ್ ನೀರು ಹಾಗೂ ಜಲಾಶಯದಿಂದ ನದಿಗೆ ಅಂದಾಜು 2 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕಡತಿ, ನಂದ್ಯಾಲ, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ಹಲುವಾಗಲು, ಗರ್ಭಗುಡಿ, ಹೂವಿನಹಡಗಲಿ ತಾಲೂಕಿನ ಮಕರಬ್ಬಿ, ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ಅಂಗೂರು, ಕೋಟಿಹಾಳ, ಕುರುವತ್ತಿ, ಹೊಸಹಳ್ಳಿ, ನಂದಿಗಾವಿ ಹಾಗೂ ಹೊಸಪೇಟೆ ತಾಲೂಕಿನ ಹೊಸೂರು, ಹಂಪಿ, ಬುಕ್ಕಸಾಗರ ಸೇರಿದಂತೆ ನದಿತೀರದ ಇತರ ಗ್ರಾಮಗಳ ನೂರಾರು ಎಕ್ಕರೆ ಪ್ರದೇಶಗಳಿಗೆ ನದಿಯ ನೀರು ನುಗ್ಗಿದ ಕಾರಣ ಬೆಳೆಗಳೆಲ್ಲ ನದಿ ನೀರಿನಲ್ಲಿ ಮುಳುಗಡೆಯಾಗಿದ್ದು ನೂರಾರು ಎಕರೆ ಬೆಳೆ ಹಾನಿಯಾಗಿವೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.