

ಹೊಸಪೇಟೆ: ನಗರದ ಜೆನ್ನಿ ಮಿಲ್ಕ ಕತ್ತೆ ಮಾರಾಟ ಕಂಪನಿಯಿAದ ವಂಚನೆಗೊಳಗಾಗಿದ್ದೇವೆ ನ್ಯಾಯ ಕೊಡಿಸಿ ಎಂದು ರಾಜ್ಯದ ಮೂಲೆ ಮೂಲೆಯಿಂದ 145ಕ್ಕೂ ಅಧಿಕ ಸಂತ್ರಸ್ತ ರೈತರು ಇಲ್ಲಿನ ಪಟ್ಟಣ ಠಾಣೆ ಪ್ರಕರಣ ದಾಖಲಿಸಿದ್ದಾರೆ. ತನಿಖೆಗೆ ಎಸ್ಪಿ ಬಿ.ಎಲ್. ಶ್ರೀಹರಿಬಾಬು ಅವರು ಮೂರು ವಿಶೇಷ ತಂಡ ರಚನೆ ಮಾಡಿದ್ದು, ಈ ತಂಡ ಹೊಸಪೇಟೆ, ಆಂಧ್ರಪ್ರದೇಶದಲ್ಲೂ ತನಿಖೆ ಕೈಗೊಂಡಿದೆ.
ನಗರದ ಹಂಪಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಜೆನ್ನಿ ಮಿಲ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರಳಿ ಮತ್ತು ಕಂಪನಿ ಮ್ಯಾನೇಜರ್ ಶಂಕರ್ ರೆಡ್ಡಿ ಮತ್ತು ಇತರರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಗರದ ನಿವಾಸಿ ಮಲ್ಲೇಶಪ್ಪ ಎಂಬವರು ದೂರು ಸಲ್ಲಿಸಿದ್ದು, ಇದರನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹಂಪಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಜೆನ್ನಿ ಮಿಲ್ಕ್ ಕಂಪನಿ ಮೂರು ಕತ್ತೆ ಮತ್ತು ಮೂರು ಕತ್ತೆ ಮರಿಗಳನ್ನು ಖರೀದಿಸಿದರೆ ಒಂದು ಯುನಿಟ್ ಎಂದು ಪರಿಗಣಿಸಿ ಮೂರು ಲಕ್ಷ ರೂ. ಪಡೆಯುತ್ತಿತ್ತು. ಈ ಕತ್ತೆಗಳಿಂದ ಪ್ರತಿನಿತ್ಯ 2 ಲೀಟರ್ ಹಾಲು ಹಿಂಡಿ ಕಂಪನಿಯರು ಕೊಟ್ಟ ಡಿ-ಫ್ರೀಡ್ಜ್ನಲ್ಲಿ ಸಂಗ್ರಹಿಸಿಡುತ್ತಿದ್ದರು. ಪ್ರತಿ ಲೀಟರ್‌ಗೆ ಕಂಪನಿ 2,350 ರೂ. ನೀಡಿ ಖರೀದಿ ಮಾಡುತ್ತಿತ್ತು. 10 ದಿನಕ್ಕೊಮ್ಮೆ ವಿತರಕರು ಆಗಮಿಸಿ ಹಾಲು ಖರೀದಿ ಮಾಡುತ್ತಿದ್ದರು. ಜತೆಗೆ ಅಕೌಂಟ್‌ಗೆ ಹಣ ಹಾಕಲಾಗುತ್ತಿತ್ತು. ಆದರೆ, ಈಗ ಕಂಪನಿಯ ಎಂ.ಡಿ ಮತ್ತು ಮ್ಯಾನೇಜರ್ ಪರಾರಿಯಾಗಿದ್ದಾರೆ. ಹಾಗಾಗಿ ಮಲ್ಲೇಶಪ್ಪ ಎಂಬವರು ಪಟ್ಟಣ ಠಾಣೆಯಲ್ಲಿ ಮೋಸ ಮಾಡುವ ಉದ್ದೇಶದಿಂದ ಒಳ ಸಂಚು ರೂಪಿಸಿ, ನಂಬಿಸಿ ಹಣ ಹೂಡಿಕೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಹಾಲು ಹಿಂಡದ ಕಳಪೆ ಗುಣಮಟ್ಟದ ಕತ್ತೆಗಳನ್ನು ಕೂಡ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಾನು 2.50 ಲಕ್ಷ ರೂ. ನೀಡಿ ಒಂದು ಯುನಿಟ್ ಕತ್ತೆಗಳನ್ನು ಖರೀದಿಸಿರುವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈಗ ಎಫ್‌ಐಆರ್ ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರದ ಜೆನ್ನಿ ಮಿಲ್ಕ್ ಕಂಪನಿ ವಿರುದ್ದ ದೂರು ನೀಡಲು ನೂರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ಕಲಬುರಗಿ, ಗದಗ , ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ರೈತರು ದೂರು ಸಲ್ಲಿಸಿದರು. ಒಂದು ಯುನಿಟ್, ಮೂರು ಯುನಿಟ್, ಐದು ಯುನಿಟ್ ಮತ್ತು ಹತ್ತು ಯುನಿಟ್ ಕತ್ತೆ ಖರೀದಿ ಮಾಡಿರುವ ರೈತರು. ಲಕ್ಷಗಟ್ಟಲೇ ಹಣ ಬಂಡವಾಳ ಹಾಕಿದ್ದೇವೆ. ಕತ್ತೆಗಳ ಖರೀದಿಗೆ ಚಿನ್ನ ಗಿರವಿ ಇಟ್ಟಿದ್ದೇವೆ, ಸಾಲಸೋಲ ಮಾಡಿ ಕತ್ತೆಗಳನ್ನು ಖರೀದಿ ಮಾಡಿದ್ದೇವೆ. ಮಗಳ ಮದುವೆಗೆ ಕೂಡಿಟ್ಟ ಹಣದಲ್ಲೂ ಕತ್ತೆಗಳನ್ನು ಖರೀದಿ ಮಾಡಿದ್ದೆವೆ. ಈಗ ಕಂಪನಿ ಈ ರೀತಿ ದೋಖಾ ಮಾಡುತ್ತದೆ ಎಂದುಕೊAಡಿರಲಿಲ್ಲ. ನಮ್ಮ ಹಣವನ್ನು ಸರ್ಕಾರ ಹಿಂದುರಗಿಸಿಕೊಡಬೇಕು ಎಂದು ಅನ್ಯಾಯಕ್ಕೊಳಗಾದವರು ಅಳಲು ತೋಡಿಕೊಂಡರು.
ಕತ್ತೆಗಳ ಮಾರಾಟ ಮಾಡುತ್ತಿದ್ದ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಅನ್ಯಾಯಕ್ಕೊಳಗಾದವರು ದೂರು ನೀಡುತ್ತಿದ್ದಾರೆ. ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ. - ಬಿ.ಎಲ್. ಶ್ರೀಹರಿಬಾಬು, ಎಸ್ಪಿ ವಿಜಯನಗರ.