ಭ್ರಷ್ಟಾಚಾರದಲ್ಲಿ ಸರ್ಕಾರ ಕಪ್ಪು ಕಾಗೆ

19 MANJU 01
Published on

ಹೊಸಪೇಟೆ: ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಜನರ ಗಮನ ಬೇರೆಡೆಗೆ ಸೆಳೆಯಲು ಫಲವಿಲ್ಲದ ಪ್ರಯತ್ನಗಳು ನಡೆಸುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಭಂಡ ಧೈರ್ಯವಿದೆ. ಸರ್ಕಾರದ ಹಲವು ಹಗರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಲೇ ಇವೆ. ವಾಲ್ಮೀಕಿ ಹಗರಣದಲ್ಲಿ ಎಸ್‌ಐಟಿ ಶಾಸಕರಾದ ನಾಗೇಂದ್ರ ಮತ್ತು ದದ್ದಲ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಆದರೆ ಇಡಿ ತನಿಖೆಯಲ್ಲಿ ನಾಗೇಂದ್ರ ಅವರೇ ಮೊದಲನೇ ಆರೋಪಿ. ಈ ಪ್ರಕರಣ ಸಿಬಿಐ ತನಿಖೆ ಆಗಬೇಕು. ಭ್ರಷ್ಟಾಚಾರ ವಿಚಾರದಲ್ಲಿ ಸರ್ಕಾರ ಕಪ್ಪು ಕಾಗೆ ಆಗಿಬಿಟ್ಟಿದೆ, ಅದರಲ್ಲಿ ಕಪ್ಪು ಚುಕ್ಕೆ ಹುಡುಕುವಂತೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಿದರೆ ಒಂದು ಡಜನ್ ರೇಸ್ ನಲ್ಲಿದ್ದಾರೆ. ಸೂಟ್ ಗಳು ಒಲಿಸಿಕೊಂಡಿದ್ದಾರೆ, ಹೋಮ ಮಾಡಿಸ್ತುತಿದ್ದಾರೆ, ಸ್ವಾಮಿಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕೇವಲ ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ಗೊಂದಲ ಮಾಡುತ್ತಿದೆ. ಎಸ್ಸಿಪಿ, ಟಿಎಸ್ಪಿ ಹಣ, ವಾಲ್ಮೀಕಿ ಹಗರಣ, ಮುಡಾ ಹಗರಣ ಹೀಗೆ ಸಾಕಷ್ಟಿವೆ. ಅರಣ್ಯ ಭೂಮಿಯನ್ನೂ ಈಶ್ವರ್ ಖಂಡ್ರೆ, ರಮೇಶ್ ಕುಮಾರ್ ಸೇರಿದಂತೆ ಅನೇಕರು ಅರಣ್ಯ ಭೂಮಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಬAಧಿಕರಿಗೂ ಅರಣ್ಯ ಭೂಮಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ತನ್ನ ಭ್ರಷ್ಟಾಚಾರ ಮುಚ್ಚಿಹಾಕಲು ವಾಮ ಮಾರ್ಗದಲ್ಲಿ ನಡೆದಿದೆ. ಶಾಸಕ ಮುನಿರತ್ನ ವಿರುದ್ಧ ಆರೋಪ ಬಂದ ತಕ್ಷಣ ಬಂಧಿಸುತ್ತೀರಿ, ಪರಶುರಾಮ ಸಾವು ಸಂಭವಿಸಿ ಎರಡೂವರೆ ತಿಂಗಳು ಕಳೆದರೂ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರನನ್ನು ಬಂಧಿಸಿಲ್ಲ. ಈಗ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಲಾಗ್ತಿದೆ. ಗಲಭೆಗಳಲ್ಲಿ ಕೇರಳ, ಪ.ಬಂಗಾಳದವರು ಇದ್ದಾರೆ. ಆದ್ದರಿಂದ ಗಲಾಟೆಗಳ ವಿಡಿಯೋ ನೋಡಿ, ಎಫ್‌ಎಸ್‌ಎಲ್‌ಗೆ ಕಳುಹಿಸಿ, ಸತ್ಯ ಏನೆಂದು ಗೊತ್ತಾಗಲಿದೆ ಬಂಧಿಸಿ ಎಂದರು. ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರಮುಖರಾದ ಅಯ್ಯಳ್ಳಿ ತಿಮ್ಮಪ್ಪ, ಕಿಚಡಿಕೊಟ್ರೇಶ, ರಾಘವೇಂದ್ರ, ಶಂಕರ್ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net