ತೆಂಗಿಗೆ ಚಿನ್ನದ ಬೆಲೆಯಿಂದ ತಟ್ಟಿ ಬಿಸಿ

Coconut 1
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ತೆಂಗಿನಕಾಯಿ ಬೆಳೆಯಲ್ಲಿ ಇಳುವರಿ ಕೊರತೆ ಮತ್ತೊಂದೆಡೆ ಬೇಸಿಗೆ ಹಿನ್ನೆಲೆಯಲ್ಲಿ ದರ ಗಗನಕ್ಕೇರಿದ್ದು, ಮುಟ್ಟುತ್ತಿದೆ.

ತೆಂಗಿನ ಕಾಯಿ ನಿತ್ಯದ ಅಡುಗೆ, ಪೂಜಾ ಕೈಂಕರ್ಯ ಸೇರಿದಂತೆ ಇತರೆ ಕಾರ್ಯಗಳಗೆ ಅತಿ ಅವಶ್ಯಕತೆ. ಅಗತ್ಯ ವಸ್ತುಗಳಲ್ಲಿ ಒಂದಾಗಿರುವ ತೆಂಗಿನ ಕಾಯಿಗೆ ಸಧ್ಯ ಬಂಗಾರದ ಬೆಲೆ ಬಂದಿದೆ. ತಿಂಗಳ ಹಿಂದಷ್ಟೇ 15ರಿಂದ 20 ರೂ.ಗೆ ಸಿಗುತ್ತಿದ್ದ ತೆಂಗಿನಕಾಯಿ ಇದೀಗ 30 ರಿಂದ 40 ರೂ.ಗೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ತೆಂಗಿನಕಾಯಿ 62ರಿಂದ 65 ರೂ.ಗೆ ಮಾರಾಟವಾಗುತ್ತಿದೆ. ಪ್ರಸ್ತುತ ಇಳುವರಿ ಕಡಿಮೆಯಾಗಿ ಬೇಡಿಕೆ ಹೆಚ್ಚಿರುವ ಪರಿಣಾಮ ಬೆಲೆ ಏರಿಕೆಯಾಗುತ್ತಲೇ ಇದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಹೊಸ ತೆಂಗು ಬಂದ ಬಳಿಕವಷ್ಟೇ ಬೆಲೆ ಇಳಿಮುಖವಾಗಬಹುದು ಎನ್ನುತ್ತಾರೆ ವರ್ತರು.

ಜಿಲ್ಲೆಯ 1437 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಬೆಳೆಯುವ ತೆಂಗು ಇಲ್ಲೆ ಕಡಿಮೆ ಬರುತ್ತದೆ. ಆದ್ದರಿಂದ ಜಿಲ್ಲೆಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಜಿಲ್ಲೆಗೆ ಆಮದು ಆಗುತ್ತದೆ. ಆ ಭಾಗದಲ್ಲಿ ಇಳುವರಿ ಕಡಿಮೆಯಾಗಿದ್ದರಿಂದ ಬೆಲೆ ಹೆಚ್ಚಳ ಹಿನ್ನೆಲೆ ಎಳನೀರನ್ನು ಕೀಳಿಸಿ ಮುಂಬಯಿ, ಹೊಸದಿಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿರುವ ಪರಿಣಾಮ ಸ್ಥಳೀಯವಾಗಿ ಎಳನೀರಿಗೂ ಡಿಮ್ಯಾಂಡ್ ಹೆಚ್ಚಿದೆ. ಕೆಲ ದಿನಗಳ ಹಿಂದೆ 30 ರೂ. ಇದ್ದ ಎಳನೀರು 50 ರಿಂದ 60 ರೂ. ಗೆ ಜಿಗಿತ ಕಂಡಿದೆ. ಬೇಡಿಕೆಗೆ ಅನುಗುಣವಾಗಿ ತೆಂಗು ಹಾಗೂ ಕೊಬ್ಬರಿ ಸಿಗದೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಜನುವರಿಗೂ ಮುನ್ನ ಕ್ವಿಂಟಾಲ್‌ಗೆ 8 ರಿಂದ 8.5 ಸಾವಿರ ರೂ. ಇದ್ದ ಕೊಬ್ಬರಿ ಪ್ರಸ್ತುತ 14,500ರಿಂದ 15 ಸಾವಿರ ರೂ.ಗಳಿಗೆ ಜಿಗಿತ ಕಂಡಿದೆ. ಎಳನೀರು ಯಥೇಚ್ಛವಾಗಿ ಮಾರಾಟ ಮಾಡಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎಂಬ ವಾದವೂ ಇದೆ. ಈ ಬಾರಿ ಬೇಸಿಗೆಗೆ ಮುನ್ನವೇ ಎಳನೀರು ಒಂದಕ್ಕೆ 40 ರೂ.ಗೆ ಏರಿಕೆ ಕಂಡಿರುವುದು ದಾಖಲೆಯೇ ಸರಿ. ಬೇಸಿಗೆಯಲ್ಲಿ ಇನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಹೋಟೆಲ್ ಉದ್ಯಮಕ್ಕೂ ಎಫೆಕ್ಟ್

ತೆಂಗಿನ ಕಾಯಿ ದರ ಏರಿಕೆ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಚಟ್ನಿ, ಸಾಂಬಾರ್, ಗೊಜ್ಜು, ಪಲಾವ್, ಪಲ್ಯ ಸಹಿತ ನಾನಾ ತಿಂಡಿ-ತಿನಿಸು, ಮಸಾಲ ಪದಾರ್ಥ ತ ಯಾರಿಸಲು ತೆಂಗಿನಕಾಯಿ ಹೆಚ್ಚು ಬೇಕಿದೆ. ಗ್ರಾಹಕರಿಗೆ ರುಚಿಯಾದ ತಿಂಡಿ-ಊಟ ಪೂರೈಸ ಬೇಕೆಂದರೆ ದುಬಾರಿಯಾದರೂ ತೆಂಗಿನಕಾಯಿ ಬಳಸುವುದು ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು. ಇನ್ನೂ ಕೆಲ ಹೊಟೇಲ್‌ಗಳಲ್ಲಿ ಕೊಬ್ಬರಿ ಚಟ್ನಿ ಮಾಡದೇ, ಇತರೆ ಚಟ್ನಿ ಮಾಡುತ್ತಿದ್ದಾರೆ

ಧಾರ್ಮಿಖ ಕಾರ್ಯಕ್ಕೂ ಬಿಸಿ

ಹಂಪಿ ವಿರೂಪಾಕ್ಷೇಶ್ವರ ಸೇರಿದಂಥೆ ನಿತ್ಯ ಅನ್ನದಾಸೋಹ ವ್ಯವಸ್ಥೆ ಇರುವ ಹಾಗೂ ಸಾವಿರಾರು ಭಕ್ತರು ಭೇಟಿ ನೀಡುವ ಹೆಸರಾಂತ ದೇಗುಲಗಳಿಗೂ ತೆಂಗಿನಕಾಯಿ ದರ ಏರಿಕೆ ಬಿಸಿ ತಟ್ಟುತ್ತಿದೆ. ನೂರೊಂದು ಈಡುಗಾಯಿ ಅರ್ಪಣೆ ಹರಕೆ ಹೊತ್ತ ಭಕ್ತರು ಕೂಡ ತೆಂಗಿನ ಕಾಯಿ ದರ ಏರಿಕೆಯಿಂದ ಹರಕೆ ಕಾರ್ಯವನ್ನು ಮುಂದೂಡುತ್ತಿದ್ದಾರೆ ಎನ್ನುತ್ತಾರೆ ದೇಗುಲದ ಆರ್ಚಕರು.

ಕಳೆದೊಂದು ದಶಕದಲ್ಲಿ ಕಂಡರಿಯದಷ್ಟು ಎಳನೀರು ಹಾಗೂ ತೆಂಗಿನ ಕಾಯಿಗೆ ಬೆಲೆ ಬಂದಿದೆ. ಆದರೆ ಬೇಡಿಕೆಯಷ್ಟು ಇಳುವರಿ ಇಲ್ಲ. ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿ ಮತ್ತಿತರ ಭಾಗದಿಂದ ತೆಂಗು, ಕೊಬ್ಬರಿ ಮುಂದಿನ ದಿನಗಳಲ್ಲಿ ಬಂದ ಬಳಿಕ ಬೆಲೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಚಿದಾನಂದ ಪುಜಾರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net