

| ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಪ್ರವಾಸೋದ್ಯಮ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಗೆ ಹೇರಳ ಅವಕಾಶಗಳಿರುವ ವಿಜಯನಗರ ಜಿಲ್ಲೆಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಆದ್ಯತೆ ಸಿಗಲಿದೆಯೇ ಎಂಬ ನಿರೀಕ್ಷೆಗಳು ಜನರಲ್ಲಿ ಗರಿಗೆದರಿವೆ.
ಅಂತಾರಾಷ್ಟ್ರೀಯವಾಗಿ ಖ್ಯಾತಿ ಪಡೆದಿರುವ ಹಂಪಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆ ಘೋಷಿಸುವ ನಿರೀಕ್ಷೆಗಳಿವೆ. ಹಂಪಿ ಸ್ಮಾರಕಗಳು ಶಿಥಿಲ ಗೊಳ್ಳುತ್ತಿದ್ದು ಜೀರ್ಣೋದ್ದಾರೆ ಕೈ ಕೆಲಸಗಳು ನಡೆಯಬೇಕಾದ ಅನಿವಾರ್ಯ ಇದೆ.
ಹಂಪಿಯಲ್ಲಿ ಮೂಲ ಸೌಕರ್ಯಗಳ ಕೊರತೆಯೂ ಬಹಳಷ್ಟಿದೆ. ಪ್ರವಾಸಿಗರಿಗೆ ಕುಡಿವ ನೀರು, ಶೌಚಗೃಹ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕಿದೆ. ಹಂಪಿಗೆ ಹೊಂದಿಕೊಂಡು ದರೋಜಿ ಕರಡಿಧಾಮ, ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಶುಂಗಭದ್ರಾ ಜಲಾಶಯಗಳಿದ್ದು ಈ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕಿದೆ.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆ ಪಾರ್ಕ್ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಬೇಕೆಂಬ ಬಯಕೆ ಇಲ್ಲಿನ ಉದ್ಯಮಿಗಳಲ್ಲಿದೆ. ವಿಜಯನಗರ ಜಿಲ್ಲೆಯಲ್ಲಿ ಕೈಗಾರಿಕೆ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರಿದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ವಿಮಾನ ನಿಲ್ದಾಣ ನಿರ್ಮಾಣ ಹಾಗೂ ಪ್ರವಾಸೋದ್ಯಮ ಕ್ಲಸ್ಟರ್ ಪ್ರಮುಖ ಬೇಡಿಕೆಗಳಾಗಿವೆ.
ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಈ ಭಾಗದಲ್ಲಿ ಸುಗಂಧಿ ಬಾಳೆ ಬೆಳೆಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಾಳೆ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕೆಂಬ ಕೂಗು ಇದೆ. ಕೃಷಿ ಕಾಲೇಜು ಸ್ಥಾಪನೆಯ ಬೇಡಿಕೆಯೂ ಇದೆ. ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಬಹುತೇಕ ತಾಲೂಕುಗಳು ನೀರಾವರಿಯಿಂದ ವಂಚಿತವಾಗಿವೆ. ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ರೈತರು ಮಳೆ ನಂಬಿ ಕೃಷಿ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಒಣ ಬೇಸಾಯ ಸಂಶೋಧನಾ ಕೇಂದ್ರ ಸ್ಥಾಪಿಸಬೇಕೆಂಬ ಬೇಡಿಕೆಯೂ ಇದೆ.
ಹೊಸಪೇಟೆಯಿಂದ ಕೂಡ್ಲಿಗಿ ಮಾರ್ಗವಾಗಿ ಬೆಂಗಳೂರಿಗೆ ಹೊಸ ರೈಲ್ವೆ ಮಾರ್ಗ ಆಗಬೇಕಿದೆ. ಕೂಡ್ಲಿಗಿ, ಹಡಗಲಿ ತಾಲೂಕುಗಳಿಗೆ ರೈಲು ಮಾರ್ಗ ವಿಸ್ತರಣೆ ಮಾಡುವ ಮೂಲಕ ಅಭಿವದ್ಧಿಗೆ ಮುಂದಾಗ ಬೇಕಿದೆ. ಕೊಟ್ಟೂರು ಮೂಲಕ ಬೆಂಗಳೂರು, ಹಾಸನ, ಅರಸಿಕೆರೆ ಮಾರ್ಗದಲ್ಲಿ ರೈಲು ಓಡಿಸಬೇಕು. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ಗಳಿವೆ. ಹೊಸಪೇಟೆಯಿಂದ ಬಳ್ಳಾರಿ ಮೂಲಕ ಆಂಧ್ರದ ಗಡಿ ಭಾಗದವರೆಗೆ ಸಂಪರ್ಕ ಕಲಿಸುವ ರಾಷ್ತ್ರೀಯ ಹೆದ್ದಾರಿ 676 ಕಾಮಗಾರಿ ನಿಗದಿತ ಕಾಲಾವಧಿ ಮುಗಿದು 6 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ವಾಹನ ವಾಹನ ಸವಾರರಿಗೆ ಹೆದ್ದಾರಿ ಮೃತ್ಯುಕೂಪವಾಗಿದೆ. ಹೆದ್ದಾರಿ ಬದಿ ಜಮೀನಿನ ರೈತರು ಧೂಳಿನಿಂದ ಕಂಗೆಟ್ಟಿದ್ದಾರೆ. ಅಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಯವಾಗಿದೆ. ಹಗರಿಬೊಮ್ಮ ನಹಳ್ಳಿ, ಹರಪನಹಳ್ಳಿ ಮಾರ್ಗವಾಗಿ ರಾಷ್ತ್ರೀಯ ಹೆದ್ದಾರಿ 50 ರಿಂದ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕ ಕಲ್ಪಿಸಬೇಕು ಎಂಬ ಒತ್ತಾಯವಿದೆ.