ಕೃಷಿ ಜಮೀನುಗಳಿಗೆ ಮಾರಕವಾದ ತ್ಯಾಜ್ಯ

oplus_0
oplus_0
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಜಯನಗರ ಅರಸರ ಕಾಲದಿಂದಲ್ಲೂ ಕಮಲಾಪುರ ಕೆರೆ ಸಾವಿರಾರು ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರುಣಿಸುತ್ತಿದೆ. ಪಟ್ಟಣದ ಹೊರವಲಯದ (ಪೊಲೀಸ್‌ಠಾಣೆ ಹಿಂಭಾಗ) ಹುಲಿಗೇರಿ ಮಾಗಾಣಿಗೂ ನೀರೂಣಿಸುತ್ತಿತ್ತು. ಆದರೆ, ಕಳೆದ ದಶಕಗಳಿಂದ ಕೆರೆ ನೀರು ಬಾರದೇ ಪಟ್ಟಣದ ಚರಂಡಿ ನೀರಿನಿಂದ ಫಲವತ್ತತೆ ಕಳೆದುಕೊಳುತ್ತಿದ್ದು, ರೈತರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಮಲಾಪುರದಲ್ಲಿ ರಾಜಕಾಲುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಅಲ್ಲದೆ, ಪಟ್ಟಣದ ತ್ಯಾಜ್ಯವನ್ನು ಕಚ್ಚಾ ಗಟಾರದಲ್ಲಿ ಬಿಡುತ್ತಿರುವ ಕಾರಣ ಮಳೆಗಾಲದಲ್ಲಿ ಇಲ್ಲಿನ ಹುಲಿಗೇರಿ ಮಾಗಾಣಿಯ ನೂರಾರು ಎಕರೆ ಕೃಷಿ ಭೂಮಿ ಕೊಳಚೆ ನೀರಲ್ಲಿ ಮುಳುಗುತ್ತಿದೆ. ಈ ಭಾಗದಲ್ಲಿ ಅಂದಾಜು 50 ಕೃಷಿಕರ 80 ಎಕರೆ ಕೃಷಿ ಜಮೀನಿದೆ. ಸಮೃದ್ಧ ಫಸಲು ನೀಡುತ್ತಿದ್ದ ಭೂಮಿ ದಶಕದಿಂಚೇಗೆ ಫಲವತ್ತತೆ ಕಳೆದುಕೊಂಡಿದೆ. ಈ ಜಮೀನುಗಳಲ್ಲಿ ಕೆಲಸ ಮಾಡಲು ಕೂಲಿಗಳು ಈಗ ಮುಂದೆ ಬರುತ್ತಿಲ್ಲ. ಒಂದೊಮ್ಮೆ ಇಲ್ಲಿ ಕೆಲಸ ಮಾಡಿದರೂ ಚರ್ಮ ರೋಗದಂಥ ವ್ಯಾಧಿ ಬಾಧಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಜಮೀನು ಮಧ್ಯ ಭಾಗದಲ್ಲಿ ನಗರದ ತ್ಯಾಜ್ಯ ಹೊತ್ತು ಸಾಗುವ ಬೃಹತ್ ಪ್ರಮಾಣದ ಕಚ್ಚಾ ಗಟಾರ ಇರುವುದು.

ಕೃಷಿ ಕಾಯಕ್ಕೆ ಅಡ್ಡಿ

ಪಟ್ಟಣದ ನೀರು ನಿರಂತರವಾಗಿ ಹರಿಯುತ್ತದೆ. ಕೆರೆಯ ಕಾಲೂವೆ ಈಗ ಕಚ್ಚಾ ಗಟಾರವಾಗಿದೆ. ಅದು ಕೂಡ ನಿರ್ವಹಣೆಯಿಲ್ಲದೆ ನೀರು ಹರಿದು ಹೋಗದ ಸ್ಥಿತಿ ಇದೆ. ತ್ಯಾಜ್ಯ ಮಿಶ್ರಿತ ನೀರು ಗದ್ದೆಗೆ ಬಂದು ಕೃಷಿ ಕಾಯಕ ಮಾಡದಂತೆ ತಡೆಯೊಡ್ಡುತ್ತದೆ. ಪಟ್ಟಣದ ಪ್ಲಾಸ್ಟಿಕ್, ಬಾಟಲಿ, ಮನೆಗಳ ತ್ಯಾಜ್ಯ, ಮಾಂಸ ತ್ಯಾಜ್ಯ, ಇ-ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಸೇರಿ ಎಲ್ಲ ಬಗೆಯ ತ್ಯಾಜ್ಯ ಗದ್ದೆಗೆ ಸೇರುತ್ತದೆ. ಮಳೆಗಾಲದಲ್ಲಿ ಕೃಷಿ ಜಮೀನು ಮುಳುಗಡೆಯಾಗುತ್ತದೆ. ಹೀಗಾಗಿ, ಇಲ್ಲಿ ಕಾರ್ಯ ಮಾಡುವ ಕೃಷಿಕರು ಚರ್ಮರೋಗಕ್ಕೆ ತುತ್ತಾದ ಉದಾಹರಣೆಗಳು ಸಾಕಷ್ಟಿವೆ.

ನಮ್ಮ ಗೋಳು ಕೇಳಿ ಸ್ವಾಮಿ

ಕಮಲಾಪುರ ಹುಲಿಗೇರಿ ಮಾಗಾಣಿ ಭಾಗದ ಕೃಷಿ ಜಮೀನಿಗೆ ಪಟ್ಟಣದ ತ್ಯಾಜ್ಯ ಸೇರ್ಪಡೆ ಆಗುವ ಸಮಸ್ಯೆಗಳನ್ನು ಸಂಬAಧಪಟ್ಟವರಿಗೆ ನಮ್ಮ ಗೋಳು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇರುವ ಜಮೀನಿನಲ್ಲಿ ಕೃಷಿ ಮಾಡದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲದಂಥ ಪರಿಸ್ಥಿತಿ ನಮ್ಮದು. ಹಾಗಾಗಿ ಈ ಭಾಗದ ಕೃಷಿಕರು ಸೇರಿ ಸಾಧ್ಯವಾದಷ್ಟು ಮಟ್ಟಿಗೆ ತ್ಯಾಜ್ಯ ತೆಗೆದಿದ್ದೇವೆ. ಆದರೆ, ನಿರಂತರವಾಗಿ ತ್ಯಾಜ್ಯ ಬರುವ ಕಾರಣ ನಾವು ಮಾಡಿದ ಶ್ರಮ ವ್ಯರ್ಥ ಆಗುತ್ತದೆ. ಮಳೆಗಾಲ ಪೂರ್ವದಲ್ಲಿ ಕಾಲುವೆ ಸ್ವಚ್ಛಗೊಳಿಸಿ ಜಮೀನು ಉಳಿಸಿಕೊಡಬೇಕು. ಕಚ್ಚಾ ರಾಜಕಾಲುವೆ ಬದಲಿಗೆ ಸಂಪೂರ್ಣವಾಗಿ ಪಕ್ಕಾ ಕಾಂಕ್ರೀಟ್ ಕಾಲುವೆ ನಿರ್ಮಿಸಬೇಕು ಎಂದು ರೈತರ ಆಗ್ರಹಿಸಿದ್ದಾರೆ.

ಕೃಷಿ ಜಮೀನಿಗೆ ಪಟ್ಟಣದ ಚರಂಡಿ ನೀರು ನುಗ್ಗುವುದು ಮಾಹಿತಿ ಇಲ್ಲ. ಒಂದು ವೇಳೆ ಹಾಗೆನಾದರೂ ಇದ್ದರೆ, ಚರ್ಚಿಸಿ ಸಮಸ್ಯೆ ಪರಿಹಾರ ಮಾಡಲಾಗುತ್ತದೆ. ಈಗ ಸ್ವಚ್ಛಗೊಳಿಸಿ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ. - ಡಿ.ಬಿ.ಈರಣ್ಣ, ಪುರಸಭೆ ಮುಖ್ಯಾಧಿಕಾರಿ, ಕಮಲಾಪುರ

ಸ್ವಲ್ಪ ಮಳೆ ಬಂದರೆ ಸಾಕು ಊರಿನ ತ್ಯಾಜ್ಯ ನಮ್ಮ ಹೋಲಗಳಲ್ಲಿ ಇರುತ್ತದೆ. ಚರಂಡಿ ನೀರು ಬರುವುದರಿಂದ ಕೆಲಸಕ್ಕೆ ಕೃಷಿ ಕಾರ್ಮಿಕರು ಬರುತ್ತಿಲ್ಲ. ಪುರಸಭೆ ಅಧಿಕಾರಿಗಳಿಗೆ ಹೇಳಿದರೂ ಕ್ರಮಕೈಗೊಳ್ಳುತ್ತಿಲ್ಲ. ರೈತರಿಗೆ ಶಾಶ್ವತ ಪರಿಹಾರ ನೀಡಬೇಕು. - ಹೂಗಾರ ಬಸವ, ರೈತ, ಕಮಲಾಪುರ

ಕಮಲಾಪುರ ಚರಂಡಿ ಹೊಲಸು ನಮ್ಮ ಹೋಲದಲ್ಲಿ ಕಸದ ರಾಶಿ ಸೇರುತ್ತದೆ. ಕೃಷಿ ಕಾರ್ಮಿಕರು ಯಾರೂ ಬರಲ್ಲ. ಒಂದು ದಿನ ಮಳೆ ಬಂದು ಬರುವ ತ್ಯಾಜ್ಯ 15 ದಿನ ಒಬ್ಬನೇ ಹೋರಬೇಕು. ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತು ಹೋಗಿದ್ದೇವೆ. - ಖಾಸಿಂ ಸಾಬ್, ಕಮಲಾಪುರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net