ಬದಲಾಯಿತು ಮತ್ತೊಂದು ನಗರದ ಹೆಸರು! ನರ್ಮದೆಯ ತಟದಲ್ಲಿ 'ನರ್ಮದಾಪುರಂ'

narmada
Published on

ಭೋಪಾಲ್​: ಅಲಹದಾಬಾದ್​ನ್ನು ಪ್ರಯಾಗ್​ರಾಜ್​ ಆಗಿ ಮರುನಾಮಕರಣ ಮಾಡಿದಂತೆಯೇ ಮಧ್ಯಪ್ರದೇಶದ ಮತ್ತೊಂದು ನಗರ ಇದೀಗ ಹೊಸ ಹೆಸರು ಪಡೆದುಕೊಂಡಿದೆ. ನರ್ಮದಾ ನದಿ ತಟದಲ್ಲಿರುವ ಹೋಶಂಗಾಬಾದ್ ನರ್ಮದಾಪುರಂ ಎಂದು ಮರುನಾಮಕರಣ ಮಾಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ.

ಶುಕ್ರವಾರದಂದು ಹೋಶಂಗಾಬಾದ್​ನಲ್ಲಿ ನಡೆದ ನರ್ಮದಾ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ನಗರದ ಹೆಸರನ್ನು ಬದಲಾಯಿಸುವ ವಿಚಾರದಲ್ಲಿ ಮಾತನಾಡಿದರು. ಈ ನಗರದ ಹೆಸರನ್ನು ಬದಲಾಯಿಸಬೇಕೇ ಎಂದು ಜನರಲ್ಲಿ ಪ್ರಶ್ನೆ ಕೇಳಿದರು. ಅದಕ್ಕೆ ಜನರು ಒಕ್ಕೊರಲಿನಿಂದ ಹೌದು ಎಂದು ಉತ್ತರಿಸಿದಾಗ, ಏನೆಂದು ಹೆಸರಿಡಬೇಕು ಎಂದು ಮರು ಪ್ರಶ್ನೆ ಹಾಕಿದರು. ಅದಕ್ಕೆ ಜನರು ನರ್ಮದಾಪುರ ಎಂದು ಉತ್ತರಿಸಿದರು.

ಹೋಶಂಗಾಬಾದ್ ನಗರವನ್ನು ನರ್ಮದಾನಗರವನ್ನಾಗಿ ಬದಲಾಯಿಸುವ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಿದ್ದೇವೆ ಎಂದು ಚೌಹಾಣ್​ ಅವರು ತಿಳಿಸಿದ್ದಾರೆ. ನರ್ಮದಾ ನದಿ ರಾಜ್ಯದ ಜನತೆಗೆ ಎಷ್ಟೊಂದು ಸಹಕಾರಿಯಾಗಿದೆ ಎನ್ನುವುದನ್ನು ನಾವು ಮರೆಯಲಾಗದು. ನದಿಯ ತಟದಲ್ಲಿ ಕಾಂಕ್ರೀಟ್​ ಕೆಲಸ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಹೋಶಂಗಾಬಾದ್ ಹೆಸರನ್ನು ಬದಲಾಯಿಸಿರುವ ಬಗ್ಗೆ ಬಿಜೆಪಿ ನಾಯಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ರಾಮೇಶ್ವರ್ ಶರ್ಮಾ ಮಾತನಾಡಿ, "ಇದು ಒಂದು ಐತಿಹಾಸಿಕ ಕ್ಷಣ. ನರ್ಮದಾ ಮಧ್ಯಪ್ರದೇಶದ ಜೀವಸೆಲೆ. ಹೋಶಂಗಾಬಾದ್​ಗೆ ಇಲ್ಲಿಯವರೆಗೆ ದಾಳಿಕೋರನಾದ ಹೋಶಾಂಗ್ ಷಾ ಹೆಸರಿಡಲಾಗಿತ್ತು. ಆದರೆ ಇದೀಗ ಜೀವನಾಡಿ ನರ್ಮದಾ ಹೆಸರಿಡಲಾಗುತ್ತಿದೆ. ಇದು ಸಂತೋಷದ ವಿಷಯವಾಗಿದೆ." ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net