ಸುಳ್ಳು ದಾಖಲೆ ನೀಡಿ ನೌಕರಿ ಗಿಟ್ಟಿಸಿಕೊಂಡ ಅಧಿಕಾರಿ ಡಿಸ್​ಮಿಸ್​

4-RNR-04 basavarajappa
Published on

ಹಾವೇರಿ: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ನೇಮಕಗೊಂಡಿರುವುದು ದಾಖಲೆ ಸಮೇತ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ಎಂಬುವವರನ್ನು ಸೇವೆಯಿಂದ ವಜಾಗೊಳಿಸಿ ತೋಟಗಾರಿಕೆ ಇಲಾಖೆಯ ನೇಮಕಾತಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಬಸವರಾಜಪ್ಪ ತೋಟಗಾರಿಕೆ ಇಲಾಖೆಯಲ್ಲಿ 1981ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿದ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಠಿಸಿಕೊಂಡು ಇಲಾಖೆಗೆ ನೀಡಿ 2009 ಮಾರ್ಚ್​ 2ರಂದು ತೋಟಗಾರಿಕೆ ಸಹಾಯಕ ಅಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದುಕೊಂಡಿದ್ದರು.
ಇವರನ್ನು ನಿಯಮ ಬಾಹಿರವಾಗಿ ಸಕ್ರಮಗೊಳಿಸಲಾಗಿದೆ. ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಇಲಾಖೆಗೆ ಕೆಲವರು ದೂರು ನೀಡಿದ್ದರು. ಈ ಕುರಿತು ಪರಿಶೀಲಿಸಿ ವರದಿ ನೀಡಲು ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರಿಗೆ ನಿರ್ದೇಶನಾಲಯ ಸೂಚಿಸಿತ್ತು.
ಬಸವರಾಜಪ್ಪನ ದಾಖಲಾತಿ ಪರಿಶೀಲಿಸಿದಾಗ 1981ರಿಂದ 1991ರವರೆಗೆ ಅವಧಿಯಲ್ಲಿ ಆತ ದಿನಗೂಲಿ ನೌಕರ ಆಗಿರಲಿಲ್ಲ. ಬದಲಾಗಿ ಇನ್ನೂ ವಿದ್ಯಾಥಿರ್ಯಾಗಿದ್ದ. ಅಲ್ಲದೆ ಆತ 10 ದಿನಗೂಲಿ ನೌಕರನಾಗಿ ಕೆಲಸ ಮಾಡಿರುವುದು 17 ತಿಂಗಳು ಮಾತ್ರ ಎಂಬುದು ಶಾಲಾ&ಕಾಲೇಜ್​ ದಾಖಲೆ ಮೂಲಕ ತಿಳಿದು ಬಂದಿದೆ. ಆದರೂ ಬಸವರಾಜಪ್ಪ ಇಲಾಖೆಗೆ ಸುಳ್ಳು ದಾಖಲೆ ನೀಡಿ ಮುಂಬಡ್ತಿ ಪಡೆದುಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಹಾಗೂ ನೇಮಕಾತಿ ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net