Sao Paulo Metro Disaster: ದಕ್ಷಿಣ ಅಮೆರಿಕದ ಪ್ರಸಿದ್ಧ ಸಾವೊ ಪಾಲೊ ನಗರದಲ್ಲಿ ಭೀಕರ ಮೆಟ್ರೋ ದುರಂತ ನಡೆದಿದೆ. ಹಳಿಯ ಮೇಲೆ ಬಿದ್ದಿದ್ದ ಬೃಹತ್ ನಿರ್ಮಾಣ ಕ್ರೇನ್‌ಗೆ ಚಾಲಕರಹಿತ (Driverless) ಸ್ವಯಂಚಾಲಿತ ಮೊನೊರೈಲ್ ರೈಲು ವೇಗವಾಗಿ ಬಂದು ಡಿಕ್ಕಿಯಾಗಿದೆ.
ಲೈನ್ 15-ಸಿಲ್ವರ್ (ಪ್ರತಾ) ಮಾರ್ಗದಲ್ಲಿ ಈ ಘಟನೆ ನಡೆದಿದೆ. ಹಳಿಯ ಪಕ್ಕದ ಖಾಸಗಿ ಕಾಮಗಾರಿ ಸ್ಥಳದಲ್ಲಿದ್ದ ಬೃಹತ್ ಕ್ರೇನ್ ಇದ್ದಕ್ಕಿದ್ದಂತೆ ಮೊನೊರೈಲ್ ಹಳಿಯ ಮೇಲೆ ಬಿದ್ದಿದೆ. ರೈಲು ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದರಿಂದ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಲಾಗದೆ, ಹಳಿಯಲ್ಲಿದ್ದ ಕ್ರೇನ್‌ಗೆ ನೇರವಾಗಿ ಡಿಕ್ಕಿಯಾಗಿದೆ.
ಮೆಟ್ರೋ ಡಿಕ್ಕಿಯಾದ ರಭಸಕ್ಕೆ ಕ್ರೇನ್ ತುಂಡಾಗಿ ಕೆಳಗಿನ ರಸ್ತೆಗೆ ಬಿದ್ದಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಪವಾಡಸಾದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ. ಆದರೆ ಗಾಯಗೊಂಡಿರುವ ಕ್ರೇನ್ ಆಪರೇಟರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ದುರಂತದ ಬಳಿಕ ಲೈನ್ 15-ಸಿಲ್ವರ್ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವಿಲಾ ಪ್ರುಡೆಂಟೆ ಹಾಗೂ ಸಾವೊ ಲ್ಯೂಕಾಸ್ ನಿಲ್ದಾಣಗಳ ನಡುವಿನ ಸಂಚಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ. ಸದ್ಯ ಸಾವೊ ಲ್ಯೂಕಾಸ್‌ನಿಂದ ಜಾರ್ಡಿಮ್ ಕೊಲೊನಿಯಲ್ ತನಕ ಮಾತ್ರ ರೈಲುಗಳು ಓಡುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಪೇಸ್' (Paese) ಅಡಿಯಲ್ಲಿ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ತಾಂತ್ರಿಕ ತಜ್ಞರ ಪ್ರಾಥಮಿಕ ವರದಿಯ ಪ್ರಕಾರ, ಭೀಕರ ಡಿಕ್ಕಿಯ ರಭಸಕ್ಕೆ ರೈಲಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ತಕ್ಷಣವೇ ಹಾನಿಗೊಳಗಾದ ರೈಲನ್ನು ಹಳಿಯಿಂದ ತೆರವುಗೊಳಿಸಿ, ಹೆಚ್ಚಿನ ದುರಸ್ತಿಗಾಗಿ ಡಿಪೋಗೆ ಕೊಂಡೊಯ್ಯಲಾಗಿದೆ.
ಕ್ರೇನ್ ಸುರಕ್ಷತಾ ನಿಯಮಗಳನ್ನು ಮೀರಿ ಹಳಿಯ ಹತ್ತಿರ ಬಂದದ್ದು ಮತ್ತು ಹಳಿಯ ಮೇಲೆ ಬಿದ್ದದ್ದು ಹೇಗೆ ಎಂಬ ಬಗ್ಗೆ ಪೊಲೀಸರು ಹಾಗೂ ನಾಗರಿಕ ರಕ್ಷಣಾ ಪಡೆ ತನಿಖೆ ನಡೆಸುತ್ತಿವೆ. ಹಳಿಯನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿ, ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡ ಮೇಲೆಷ್ಟೇ ಈ ಮಾರ್ಗದಲ್ಲಿ ಮತ್ತೆ ಮೆಟ್ರೋ ಸಂಚಾರ ಶುರುವಾಗಲಿದೆ.