ಪಂಜಾಬ್‌ನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ 8 ಕಾರ್ಮಿಕರು ಸಾವು, 12 ಮಂದಿಗೆ ಗಾಯ | Punjab Accident

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ರಸ್ತೆ ಬದಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ಗುಂಪಿನ ಮೇಲೆ ವೇಗವಾಗಿ ಬಂದ ಕಾರು ಹರಿದಿದೆ. ಈ ಭೀಕರ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ.
Horrific accident in Punjab
ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ
Published on: 
Summary

. ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ

. ರಸ್ತೆ ಬದಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ

. ಅಪಘಾತದಲ್ಲಿ 8 ಮಂದಿ ಸಾವು, 12 ಜನರಿಗೆ ಗಾಯ

. ಗಾಯಾಳುಗಳಿಗೆ ಪಟಿಯಾಲದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ

Punjab Car Accident: ಪಂಜಾಬ್‌ನಲ್ಲಿ ವೇಗವಾಗಿ ಬಂದ ಕಾರು ರಸ್ತೆ ಬದಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ಗುಂಪಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ. ಆಂಬ್ಯುಲೆನ್ಸ್‌ಗಳು ತಡವಾಗಿ ಬಂದವು ಎಂದು ಆರೋಪಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಅಲಿಶೇರ್ ಗ್ರಾಮದ ಬಳಿ ಇರುವ ಲೆಹ್ರಾಗಾಗಾ-ಜಖಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜಖಲ್ ಕಡೆಯಿಂದ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ಮೊದಲು ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ. ಕೆಲಸದ ನಡುವೆ ನೀರು ಕುಡಿಯಲು ಬ್ರೇಕ್ ತೆಗೆದುಕೊಂಡಿದ್ದ ಕಾರ್ಮಿಕರು ಕಾರಿನ ಅಡಿಗೆ ಸಿಲುಕಿದ್ದಾರೆ.

ಐವರು ಸ್ಥಳದಲ್ಲೇ ಮೃತ

ಈ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಚಿಕಿತ್ಸೆ ಫಲಿಸದೆ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ 12 ಕಾರ್ಮಿಕರಿಗೆ ಪಟಿಯಾಲದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ಅಲಿಶೇರ್ ಗ್ರಾಮದ ನಿವಾಸಿಗಳು. ಅಪಘಾತದ ವೇಳೆ 23 ಕಾರ್ಮಿಕರು ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದರು. ಕಾರಿನಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಆಂಬ್ಯುಲೆನ್ಸ್ ತಡವಾಗಿ ಬಂದಿದ್ದಕ್ಕೆ ಆಕ್ರೋಶ

ಅಪಘಾತದ ಬಳಿಕ ಆಂಬ್ಯುಲೆನ್ಸ್‌ಗಳು ತಡವಾಗಿ ಬಂದವು ಎಂದು ಆರೋಪಿಸಿ ಸ್ಥಳೀಯರು ಲೆಹ್ರಾಗಾಗಾ-ಜಖಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ಡಿಎಸ್‌ಪಿ ಪಲ್ವಿಂದರ್ ಸಿಂಗ್ ಚೀಮಾ, ಅಜಾಗರೂಕ ಚಾಲನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Aruna Irani: ಪತಿ ನಿಧನದ ಬಳಿಕ ಅರುಣಾ ಇರಾನಿ ಕಂಬ್ಯಾಕ್; ‘ಕೊನೆಯ ಉಸಿರಿರುವವರೆಗೂ ನನ್ನ ಜತೆ ಇರಿ’ ಎಂದ ನಟಿ!

ಅಪಘಾತದಲ್ಲಿ ಮೃತಪಟ್ಟ ಎಂಟು ಮಂದಿಯನ್ನು ಕರಮ್‌ಜಿತ್ ಕೌರ್, ಜೀವನ್ ಸಿಂಗ್, ನಿಕ್ಕಿ, ಸರಬ್ಜಿತ್ ಕೌರ್, ರಂಜಿತ್ ಬೇಗಂ, ಕರಮ್‌ಜಿತ್, ರಾಣಿ ಕೌರ್ ಮತ್ತು ದೇಸರಾಜ್ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net