ಸುಂಟರಗಾಳಿ ಅಬ್ಬರ, ಅಮೆರಿಕ ತತ್ತರ; ಆರು ರಾಜ್ಯಗಳಲ್ಲಿ ಅಪಾರ ಹಾನಿ, ಹವಾಮಾನ ವೈಪರೀತ್ಯ ಕಾರಣ ಎಂದ ತಜ್ಞರು

America F
Published on
| ಬೆಂಕಿ ಬಸಣ್ಣ ನ್ಯೂಯಾರ್ಕ್

ಅಮೆರಿಕದ ಇತಿಹಾಸದಲ್ಲಿಯೇ ಕಂಡುಕೇಳರಿಯದಷ್ಟು 30 ಸುಂಟರಗಾಳಿಗಳು (ಟಾರ್ನೆಡೋ) ಒಂದೇ ದಿನ ಕಾಣಿಸಿಕೊಂಡಿವೆ. ಇದು ಆರು ರಾಜ್ಯಗಳಲ್ಲಿ ಅಪಾರ ಹಾನಿ ಉಂಟುಮಾಡಿದೆ. ಟಾರ್ನೆಡೋ ಅನಾಹುತದಿಂದ ನೂರಕ್ಕೂ ಹೆಚ್ಚು ಜನರು ಸತ್ತಿರುವ ಹಾಗೂ ಸಾವಿರಾರು ಜನರು ಕಾಣೆಯಾಗಿರುವ ಬಗ್ಗೆ ವರದಿಗಳು ಬರುತ್ತಿವೆ. ಈ ಟಾರ್ನೆಡೋಗಳು ರಾತ್ರಿ ಸಮಯದಲ್ಲಿ ಅಪ್ಪಳಿಸಿದ್ದರಿಂದ ಜೀವ ಮತ್ತು ಆಸ್ತಿಪಾಸ್ತಿಯ ವಿನಾಶದ ಪ್ರಮಾಣವು ದ್ವಿಗುಣಗೊಂಡಿದೆ.

ಈ 30 ಸುಂಟರಗಾಳಿಗಳಲ್ಲಿ ಒಂದು ಅತ್ಯಂತ ಶಕ್ತಿಶಾಲಿಯಾಗಿದ್ದು. ಅದು ನಾಲ್ಕು ರಾಜ್ಯಗಳಲ್ಲಿ ನಾಲ್ಕು ಗಂಟೆಯಲ್ಲಿ 230 ಮೈಲು ದೂರ ಕ್ರಮಿಸಿ (320 ಕಿಲೋಮೀಟರ್​ಗೂ ಹೆಚ್ಚು) ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ದೂರ ಕ್ರಮಿಸಿದ ಟಾರ್ನೆಡೋ ಎಂದು ದಾಖಲೆ ಬರೆದಿದೆ. ಇದಕ್ಕೆ ಹವಾಮಾನ ತಜ್ಞರು ಕ್ವಾಡ್ ಸ್ಟೇಟ್ ಟಾರ್ನೆಡೋ (Quad State Tornado) ಎಂದು ನಾಮಕರಣ ಮಾಡಿದ್ದಾರೆ. ಇದಕ್ಕೆ ಮೊದಲು ತೊಂಬತೆôದು ವರ್ಷಗಳ ಹಿಂದೆ ಅಂದರೆ 1925ರಲ್ಲಿ 219 ಮೈಲು ದೂರ ಕ್ರಮಿಸಿ ಮೂರು ರಾಜ್ಯಗಳನ್ನು ಧ್ವಂಸ ಮಾಡಿದ ಟಾರ್ನೆಡೋ ದಾಖಲೆ ನಿರ್ವಿುಸಿತ್ತು.

30 ಸಾವಿರ ಅಡಿ ಎತ್ತರಕ್ಕೆ ಹಾರಿದ್ದ ಅವಶೇಷ: ಈ ಸುಂಟರಗಾಳಿಗಳಲ್ಲಿ ಕೆಂಟಕಿ ರಾಜ್ಯದ ಮೇಫೀಲ್ಡ್ ಎಂಬ ನಗರವು ಸಂಪೂರ್ಣವಾಗಿ ನಾಶವಾಗಿದೆ. ಆ ನಗರದ ಅವಶೇಷಗಳು ಸುಮಾರು 30,000 ಅಡಿ ಎತ್ತರ ಹಾರಿದವು. ಇದು ವಾಣಿಜ್ಯ ವಿಮಾನಗಳು ಹಾರಾಡುವ ಎತ್ತರವಾಗಿದೆ. ಈ ನಗರವನ್ನು ಪೊಲೀಸರು ‘ಗ್ರೌಂಡ್ ಜೀರೋ’ ಎಂದು ಕರೆದಿದ್ದಾರೆ. ಶುಕ್ರವಾರ ರಾತ್ರಿ ಸುಂಟರಗಾಳಿ ಅಪ್ಪಳಿಸಿದಾಗ ಮೇಫೀಲ್ಡ್​ನ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ 110 ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಆ ಪೈಕಿ 70 ಜನರನ್ನು ರಕ್ಷಿಸಲಾಗಿದೆ. ಬದುಕುಳಿದವರನ್ನು ರಕ್ಷಿಸಲು ಶವಗಳ ಮೇಲಿಂದ ಹಾದು ಹೋಗಬೇಕಾಗುತ್ತದೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಗ್ನಿಶಾಮಕ ಪಡೆಯ ಮುಖ್ಯಸ್ಥ ಜೆರೆಮಿ ಕ್ರೀಸನ್ ಹೇಳಿದ್ದಾರೆ. ಇದು ಕ್ರಿಸ್ಮಸ್ ಸಮಯವಾಗಿದ್ದು ತನ್ನ ಸೋದರಿ ಗಿಫ್ಟ್ ನೀಡುವ ಕ್ಯಾಂಡಲ್ ತಯಾರಿಯಲ್ಲಿ ತೊಡಗಿದ್ದಳು ಎಂದು ಕೆಂಟಕಿಯ ಮೇಣದ ಬತ್ತಿ ತಯಾರಿಕೆ ಕಾರ್ಖಾನೆಯ ಬಳಿ ಸಂತ್ರಸ್ತೆಯೊಬ್ಬಳ ಸೋದರ ದುಃಖ ತೋಡಿಕೊಂಡಿದ್ದಾನೆ.ಸುಂಟರಗಾಳಿಗಳಿಂದ ಸಂಕಷ್ಟಕ್ಕೆ ಒಳಗಾದ ಆರು ರಾಜ್ಯಗಳಿಗೆ ಪರಿಹಾರಗಳನ್ನು ಶೀಘ್ರದಲ್ಲಿ ಕಲ್ಪಿಸಿಕೊಡಲು ಅಧ್ಯಕ್ಷ ಜೋ ಬೈಡೆನ್ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿಗೆ (ಫೆಮಾ) ಆದೇಶ ನೀಡಿದ್ದಾರೆ. ಈ ರಾಜ್ಯದ ಜನರಿಗೆ ವಸತಿ, ಊಟ, ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದ್ದಾರೆ. ಇದು ಐತಿಹಾಸಿಕ ವಿಕೋಪವಾಗಿದ್ದು, ಹಾನಿಗೊಳಗಾದ ಆ ಪ್ರದೇಶಗಳಿಗೆ ಶೀಘ್ರದಲ್ಲಿ ಭೇಟಿ ನೀಡುವುದಾಗಿ ಬೈಡೆನ್ ತಿಳಿಸಿದ್ದಾರೆ.

ವಿಕೋಪ ಸರಮಾಲೆ: ಕೆಲವು ತಿಂಗಳುಗಳಿಂದ ಅಮೆರಿಕದಲ್ಲಿ ನೈಸರ್ಗಿಕ ವಿಕೋಪಗಳು ಒಂದರ ಮೇಲೊಂದರಂತೆ ಅಪ್ಪಳಿಸುತ್ತಿವೆ. ಆಗಸ್ಟ್ ಕೊನೆಯ ವಾರದಲ್ಲಿ ಐಡಾ ಚಂಡಮಾರುತ ಭಯಂಕರ ಹಾನಿಯನ್ನು ಮತ್ತು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು ವ್ಯಾಪಕ ಪ್ರದೇಶಗಳನ್ನು ಸುಟ್ಟು ಹಾಕಿತ್ತು. ಇದೀಗ ಭಯಾನಕ ಟಾರ್ನೆಡೋ ಅಪ್ಪಳಿಸಿವೆ. ಇದಕ್ಕೆಲ್ಲ ಹವಾಮಾನ ವೈಪರೀತ್ಯ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಮೆಜಾನ್ ಗೋದಾಮು ನಾಶ: ಟಾರ್ನೆಡೋಗಳ ದಾಳಿಗೆ ಇಲಿನಾಯ್್ಸಲ್ಲಿ ಅಮೆಜಾನ್ ಸಂಸ್ಥೆಯ ಒಂದು ಬೃಹತ್ಡ್ ಗೋದಾಮು ನಾಶವಾಗಿದೆ. ನೂರಕ್ಕೂ ಹೆಚ್ಚು ಕಾರ್ವಿುಕರಿದ್ದ ಇಲ್ಲಿ 13 ಮಂದಿ ಸಾವನ್ನಪ್ಪಿದ್ದು, 40 ಮಂದಿಯನ್ನು ರಕ್ಷಿಸಲಾಗಿದೆ.

ಕೆಂಟಕಿಯಲ್ಲೇ 22 ಮಂದಿ ಸಾವು: ಹೆಚ್ಚು ಹಾನಿ ಸಂಭವಿಸಿರುವ ಕೆಂಟಕಿ ರಾಜ್ಯವೊಂದರಲ್ಲೇ 22 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಕೆಂಟಕಿಯಲ್ಲಿ ಮೇಣದ ಬತ್ತಿ ಕಾರ್ಖಾನೆ ಯಲ್ಲಿ ಭಾರಿ ಅನಾಹುತ ಸಂಭವಿಸಿ ಹಲವರು ಬಲಿಯಾಗಿದ್ದಾರೆ. ಇಲಿನಾಯ್್ಸ ನಲ್ಲಿ 13, ಟೆನ್ನೆಸ್ಸೀ ಯಲ್ಲಿ ನಾಲ್ವರು, ಅರ್ಕಾನ್ಸಸ್ ಮತ್ತು ಮಿಸ್ಸೌರಿಯಲ್ಲಿ ತಲಾ ಇಬ್ಬರು ಬಲಿಯಾಗಿದ್ದಾರೆ. ಅರ್ಕಾನ್ಸಸ್​ನಲ್ಲಿ ಬಿರುಗಾಳಿ ಪ್ರಕೋಪದಿಂದ ಒಂದು ನರ್ಸಿಂಗ್ ಹೋಂ ನಾಶವಾಗಿದೆ. ಅತಿ ದೀರ್ಘ ಸಮಯ ಕಾಡಿದ ಸುಳಿಗಾಳಿ ಇದಾಗಿದ್ದು ಅಮೆರಿಕದ ಮಧ್ಯಭಾಗದಲ್ಲಿ ಅಪಾರ ಕಷ್ಟನಷ್ಟ ಉಂಟುಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net