

ಕಳಸ: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಸೋಮವಾರ ಲೋಕ ಕಲ್ಯಾಣಾರ್ಥವಾಗಿ ಶ್ರೀ ಮಹಾ ಚಂಡಿಕಾ ಹೋಮ ನಡೆಯಿತು.
ಚಂಡಿಕಾಹೋಮ ಪ್ರಯುಕ್ತ ಧರ್ಮಕರ್ತ ಡಾ. ಭೀಮೆಶ್ವರ ಜೋಷಿ ಉದ್ಭವ ಗಣಪತಿ ಸ್ವಾಮಿ ಮತ್ತು ಶ್ರೀಮಾತೆಗೆ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಿದರು. ನಂತರ ಸಪ್ತಶತಿ ಪಾರಾಯಣ, ಚತುರ್ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀದೇವೀ ಭಾಗವತಾ ಪಾರಾಯಣ, ಕುಂಕುಮಾರ್ಚನೆ, ಧರ್ಮಕರ್ತ ದಂಪತಿಯಿಂದ ಅನ್ನದ ರಾಶಿ ಪೂಜೆ ನಡೆಯಿತು.
ಮಧ್ಯಾಹ್ನ ಲೋಕಕಲ್ಯಾಣಾರ್ಥವಾಗಿ ಶ್ರೀಮಾತೆಯ ಸನ್ನಿಧಿಯಲ್ಲಿ ಚಂಡಿಕಾ ಹೋಮದ ಪೂರ್ಣಾಹುತಿ ಸಂಪನ್ನವಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಬೆಂಗಳೂರಿನ ವಿದುಷಿ ರೇಖಾ ಪ್ರಸಾದ್ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ, ಸಂಜೆ ಶ್ರೀಕ್ಷೇತ್ರದ ಗೌತಮ ಎಂ.ಎಸ್. ಮತ್ತು ತಂಡದವರಿಂದ ನಾದಸ್ವರ ವಾದನ, ರಾತ್ರಿ ಹೆರಂಜಾಲು ಯಕ್ಷಮಿತ್ರ ಬಳಗ ನಾಗೂರು ಬೈಂದೂರು ಅವರಿಂದ ಚಕ್ರಚಂಡಿಕೆ ಮತ್ತು ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯರು ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಅ.15ರಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಅವರ ಪಟ್ಟಾಭಿಷೇಕ ಉತ್ಸವದ ಅಂಗವಾಗಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ, ನವಗ್ರಹ ಹೋಮ, ಜೀವ-ಭಾವ ಕಾರ್ಯಕ್ರಮ, ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.