

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಿದ್ದರೂ, ಹಬ್ಬ-ಹರಿದಿನಗಳ ವೇಳೆ ಸೋಂಕಿನ ವಿಚಾರದಲ್ಲಿ ಮೈಮರೆಯದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಎಚ್ಚರಿಸಿದ್ದಾರೆ.
ಮಂಗಳವಾರ ಸಂಜೆ ದೇಶವನ್ನುದ್ದೇಶಿಸಿ 12 ನಿಮಿಷ ಭಾಷಣ ಮಾಡಿದ ಪ್ರಧಾನಿ, ಕರೊನಾ ನಿಯಂತ್ರಣಕ್ಕೆ ಜನರ ಸಹಕಾರ ಕೋರುತ್ತಲೇ ಸಂಭಾವ್ಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದರು. ಕರೊನಾ ಕಾಣಿಸಿಕೊಂಡ ಬಳಿಕ ಮೋದಿ ದೇಶವನ್ನುದ್ದೇಶಿಸಿ ಮಾಡಿದ 7ನೇ ಭಾಷಣ ಇದು.
ಲಾಕ್ಡೌನ್ ತೆರವಾಗಿದ್ದರೂ, ಕರೊನಾ ವೈರಾಣು ನಮ್ಮ ಮಧ್ಯೆಯೇ ಇದೆ. ಮುಂದಿನ ದಿನಗಳಲ್ಲಿ ಹಬ್ಬ-ಹರಿದಿನಗಳು ಸಾಕಷ್ಟಿವೆ. ಅವು ನಮ್ಮಲ್ಲಿ ಜೀವನೋತ್ಸಾಹ, ಖುಷಿ ಹೆಚ್ಚಿಸುವುದು ಸಹಜ. ಹಾಗಂತ, ಸಣ್ಣಮಟ್ಟಿಗೆ ಮೈಮರೆತರೂ ಅಪಾಯ ಕಟ್ಟಿಟ್ಟಬುತ್ತಿ ಎಂದರು. ಲಸಿಕೆ ಬರುವ ತನಕ ಎಚ್ಚರಿಕೆಯ ಹೆಜ್ಜೆ ಇಡುತ್ತಿರಬೇಕು. ಕರೊನಾ ವೈರಸ್ ಈಗಲೂ ಜಗತ್ತನ್ನು ಬಾಧಿಸುತ್ತಿದೆ ಎಂಬ ಜಾಗೃತಿ ಇರಲಿ. ಕರೊನಾ ಇಲ್ಲವೇ ಇಲ್ಲ ಎಂಬಂತೆ ವರ್ತಿಸುವುದು ತರವಲ್ಲ. ಅನೇಕ ಮಂದಿ ಈ ಮಹಾಮಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಈಗಲೂ ಜಾಗರೂಕರಾಗಿಲ್ಲ ಎಂಬುದು ಫೋಟೋ, ವಿಡಿಯೋಗಳಲ್ಲೇ ಎದ್ದುಕಾಣುತ್ತದೆ ಎಂದರು.
ಮಾಸ್ಕ್ ಧರಿಸದೆ ಓಡಾಡುತ್ತಿದ್ದೀರಿ ಎಂದರೆ ನೀವು ನಿಮ್ಮನ್ನು ಮಾತ್ರವಲ್ಲ, ಪರಿವಾರ, ಮಕ್ಕಳು, ಹೆತ್ತವರು, ವೃದ್ಧರು ಸೇರಿ ಎಲ್ಲರನ್ನೂ ಅಪಾಯಕ್ಕೆ ತಳ್ಳುತ್ತಿದ್ದೀರಿ ಎಂದೇ ಅರ್ಥ. ಒಂದು ಹಂತದಲ್ಲಿ ಅಮೆರಿಕ, ಯೂರೋಪಿಯನ್ ದೇಶಗಳಲ್ಲಿ ಕರೊನಾ ಕಡಿಮೆಯಾಗುತ್ತಾ ಬಂತು. ಆದರೆ, ದುರದೃಷ್ಟವಷಾತ್ ಸೋಂಕಿತರ ಸಂಖ್ಯೆ ಹಠಾತ್ ಏರಿತು. ನಮ್ಮಲ್ಲಿ ಹೀಗಾಗಬಾರದು ಎಂದು ಮೋದಿ ಹೇಳಿದರು.
ಭಾರತ ಮಾದರಿ: ಅಮೆರಿಕ, ಬ್ರೆಜಿಲ್ ಸೇರಿ ಹಲವು ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಿದ್ದು, ಸಾವಿನ ಪ್ರಮಾಣ ಕಡಿಮೆಯಿದೆ. ಕರೊನಾ ನಿಯಂತ್ರಣಕ್ಕೆ ಭಾರತ ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿ ಎನಿಸಿಕೊಂಡಿವೆ. ಭಾರತದಲ್ಲಿ 10 ಲಕ್ಷ ಕರೊನಾ ಸೋಂಕಿತರಲ್ಲಿ 85 ಮಂದಿ ಸಾವಿಗೀಡಾಗುತ್ತಿದ್ದರೆ, ಅಮೆರಿಕ, ಬ್ರೆಜಿಲ್, ಸ್ಪೇನ್, ಬ್ರಿಟನ್ ಮುಂತಾದ ದೇಶಗಳ ಸಾವಿನ ಸರಾಸರಿ 600ಕ್ಕಿಂತ ಹೆಚ್ಚಿದೆ. ದೇಶದ 10 ಲಕ್ಷ ಜನರಲ್ಲಿ 5500 ಮಂದಿಗೆ ಸೋಂಕು ತಗುಲಿದ್ದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಪ್ರಮಾಣ 25000ಕ್ಕಿಂತ ಮೇಲಿದೆ. ಜನರ ಜೀವ ಉಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. 90 ಲಕ್ಷ ಕರೊನಾ ಬೆಡ್ಗಳು ಲಭ್ಯವಿವೆ. 12 ಸಾವಿರ ಕ್ವಾರಂಟೈನ್ ಕೇಂದ್ರಗಳು ದೇಶದಲ್ಲಿ ಸಜ್ಜುಗೊಂಡಿವೆ. 2000 ಕರೊನಾ ಟೆಸ್ಟ್ ಲ್ಯಾಬ್ಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಮಚರಿತ ಮಾನಸದ ವಾಕ್ಯವೊಂದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಶತ್ರು ಅಥವಾ ಅನಾರೋಗ್ಯವನ್ನು ನಾವು ಯಾವತ್ತೂ ಕಡೆಗಣಿಸಬಾರದು. ಅದೇ ರೀತಿ, ಕರೊನಾ ಮಹಾಮಾರಿಗೆ ಪರಿಹಾರ ಸಿಗುವ ತನಕ ಅದನ್ನು ‘ಸಣ್ಣದೊಂದು ವೈರಸ್ ಅಷ್ಟೇ’ ಎಂದು ನಿರ್ಲಕ್ಷ್ಯ ಭಾವದಿಂದ ಕಾಣಲೇಬಾರದು. ಕಠಿಣ, ಸವಾಲಿನ ದಿನಗಳಿಂದ ನಾವೆಲ್ಲರೂ ನಿಧಾನವಾಗಿ ಹೊರಬರುತ್ತಿದ್ದೇವೆ. ಕೊಂಚ ಎಡವಿದರೂ ಬದುಕಿನಲ್ಲೂ ಭಾರೀ ಪ್ರಮಾಣದ ಏರುಪೇರು ಉಂಟಾಗಬಹುದು. 2 ಗಜ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್ ಧರಿಸಲೇಬೇಕು. ನಿಮ್ಮ ಸುರಕ್ಷೆಯೇ ನನ್ನ ಕಾಳಜಿ.ಜಾಗೃತಿ ಮೂಡಿಸಿ: ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಕರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಮುಂದುವರಿಸಬೇಕು. ಏಕೆಂದರೆ, ವೈರಾಣು ತೊಡೆದುಹಾಕುವಲ್ಲಿ ನಿಮ್ಮ ಪಾತ್ರ ಕೂಡ ನಿರ್ಣಾಯಕ ಎಂದರು.
‘ಪ್ರಧಾನಿ ಸಂದೇಶವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಹಬ್ಬದ ಋತುವಿನಲ್ಲಿ ಎಚ್ಚರಿಕೆಯಿಂದಿದ್ದು, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಾಥ್ ನೀಡಬೇಕು’ಎಂ. ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಸುರಕ್ಷತೆಯಿಂದ ಹಬ್ಬ ಆಚರಿಸಿ. ಹಬ್ಬಗಳೆಲ್ಲವೂ ನವೋತ್ಸಾಹ ತುಂಬಲಿ. ನಿಮಗೆಲ್ಲರಿಗೂ ಶುಭಾಶಯ ಎಂದು ಮೋದಿ ಹಾರೈಸಿದ್ದಾರೆ.
ಎಲ್ಲರಿಗೂ ಲಸಿಕೆ: ಲಸಿಕೆ ಬರುವ ತನಕ ಭಾರತದ ಹೋರಾಟ ಮುಂದುವರಿಯಲಿದೆ. ಅಲ್ಲಿವರೆಗೆ ಜನರೂ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಲಸಿಕೆ ಅಂತಿಮಗೊಳಿಸಲು ವಿಜ್ಞಾನಿಗಳು ಶ್ರಮಹಾಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ದೇಶದ ವಿಜ್ಞಾನಿಗಳೂ ಲಸಿಕೆಯ ಪ್ರಯೋಗ ನಡೆಸುತ್ತಿದ್ದಾರೆ. ಮೇಲಾಗಿ, ಲಸಿಕೆಯನ್ನು ದೇಶದಲ್ಲಿ ಆದ್ಯತೆಯ ಮೇರೆಗೆ ಎಲ್ಲರಿಗೂ ವಿತರಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮೋದಿ ತಿಳಿಸಿದರು.