ಮರ್ಯಾದಾ ಹತ್ಯೆ : ಪ್ರೇಮದಲ್ಲಿ ಬಿದ್ದ ಯುವತಿಯನ್ನು ಜೀವಂತ ಸುಟ್ಟುಹಾಕಿದರು...

Handcuffs
Published on

ಸಂತ ಕಬೀರ್ ನಗರ: ಮರ್ಯಾದಾ ಹತ್ಯೆಯ ಪ್ರಸಂಗವೆಂದು ಹೇಳಲಾಗುತ್ತಿರುವ ಬೆಚ್ಚಿಬೀಳಿಸುವ ಬರ್ಬರ ಕೊಲೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಅನ್ಯಧರ್ಮೀಯನನ್ನು ಪ್ರೀತಿಸಿದ್ದ ಯುವತಿಯೊಬ್ಬಳನ್ನು ಕುಟುಂಬದವರೇ ಜೀವಂತ ಸುಟ್ಟಿಹಾಕಿರುವುದು ಪತ್ತೆಯಾಗಿದೆ.

ಫೆಬ್ರವರಿ 4 ರಂದು ಅರ್ಧ ಸುಟ್ಟಿಹೋದ ಯುವತಿಯೊಬ್ಬಳ ಶರೀರವು ಸಂತ ಕಬೀರ್ ನಗರ ಜಿಲ್ಲೆಯ ಜಿಗಿನ ಗ್ರಾಮದಲ್ಲಿ ಸಿಕ್ಕಿತ್ತು. ತನಿಖೆ ನಡೆಸಿದಾಗ ಮೃತಳು ಗೋರಖಪುರದ ಬೆಲಘಟದ ನಿವಾಸಿಯಾಗಿದ್ದ ರಂಜನ ಯಾದವ್ ಎಂಬುದು ತಿಳಿದುಬಂತು. ಮೃತ ಯುವತಿಯ ತಂದೆ ಕೈಲಾಶ್ ಯಾದವ್, ಸೋದರ ಅಜಿತ್ ಯಾದವ್, ಭಾವ ಸತ್ಯಪ್ರಕಾಶ ಯಾದವ್ ಮತ್ತು ಸೀತಾರಾಮ ಯಾದವ್ ಎಂಬುವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸಂತ ಕಬೀರ್ ನಗರ ಎಸ್ಪಿ ಕೌಸ್ತುಭ್ ಹೇಳಿದ್ದಾರೆ.

ವಿಚಾರಣೆಯ ವೇಳೆ ಮೃತಳ ತಂದೆ ಕೈಲಾಶ್ ಯಾದವ್, ರಂಜನಾ ಮುಸ್ಲಿಂ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಎಷ್ಟು ಹೇಳಿದರೂ ತನ್ನ ಪ್ರೇಮಿಯನ್ನು ಬಿಡಲು ಸಿದ್ಧವಿರಲಿಲ್ಲ. ಆ ಕಾರಣಕ್ಕೆ ಅವಳನ್ನು ಸಾಯಿಸಲು ಮಹುಲಿಯ ಕಾಂಟ್ರಾಕ್ಟ್ ಕಿಲ್ಲರ್​ಗೆ ಒಂದೂವರೆ ಲಕ್ಷ ರೂಪಾಯಿ ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ರಂಜನಾಳವನ್ನು ನಿರ್ಜನ ಪ್ರದೇಶವೊಂದಕ್ಕೆ ಮೊಟರ್​ಸೈಕಲ್​ನಲ್ಲಿ ಕರೆದೊಯ್ದ ಆರೋಪಿಗಳು, ಆಕೆಯ ಬಾಯಿ ಮತ್ತು ಕೈಗಳನ್ನು ಕಟ್ಟಿದ್ದಾರೆ. ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಓಡಿ ಹೋಗಿದ್ದಾರೆ ಎನ್ನಲಾಗಿದೆ. ಅಪರಾಧಕ್ಕೆ ಬಳಸಲಾದ ಪೆಟ್ರೋಲ್ ಕಂಟೇನರ್ ಮತ್ತು ಮೋಟರ್​ಸೈಕಲ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಂಟ್ರಾಕ್ಟ್ ಕಿಲ್ಲರ್​ ವರುಣ್ ತಿವಾರಿಯ ಪತ್ತೆ ಕಾರ್ಯ ನಡೆಯುತ್ತಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net