

ಕೆ.ಆರ್.ನಗರ: ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿದರೆ ಅವರು ಭವಿಷ್ಯದಲ್ಲಿ ಮತ್ತಷ್ಟು ಎತ್ತರಕ್ಕೇರಲು ಸ್ಫೂರ್ತಿ ಸಿಗಲಿದೆ ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಸೆಂಟ್ರಲ್ ಸಿಲಬಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ 9ನೇ ಸ್ಥಾನದಲ್ಲಿದ್ದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಈ ಬಾರಿ 4ನೇ ಸ್ಥಾನಕ್ಕೇರಲು ಕಾರಣರಾದ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕ್ಷೇತ್ರ ರಾಜ್ಯದಲ್ಲಿಯೇ ಉತ್ತಮ ಸ್ಥಾನ ಪಡೆಯುವಂತೆ ಕಾರ್ಯಯೋಜನೆ ರೂಪಿಸಿ ಅದರ ಅನುಷ್ಠಾನಕ್ಕೆ ಕೆಲಸ ಮಾಡಿದರೆ ಶಿಕ್ಷಣ ಇಲಾಖೆಗೆ ಅಗತ್ಯ ಸಹಕಾರ ಒದಗಿಸಲಾಗುವುದು. ಜತೆಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪಾಲಕರು ಅತ್ಯಂತ ಮಹದಾಸೆಯಿಂದ ಶಿಕ್ಷಕರನ್ನು ನಂಬಿ ಶಾಲೆಗೆ ಕಳುಹಿಸುತ್ತಾರೆ. ಅವರ ನಂಬಿಕೆಯನ್ನು ಹುಸಿ ಮಾಡದಂತೆ ಶಿಕ್ಷಕರೆಲ್ಲರೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕ, ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡಲಿ ಎಂದು ಶುಭಕೋರಿದರು.
ಶೈಕ್ಷಣಿಕ ಬದುಕಿಗೆ ತಿರುವು ನೀಡುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವ್ಯಾಸಂಗ ಮಾಡುವಾಗ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಲಕರ ನಿರೀಕ್ಷೆ ಮತ್ತು ಶಿಕ್ಷಕರ ಮಾರ್ಗದರ್ಶಕರನ್ನು ಚಾಚೂತಪ್ಪದೆ ಪಾಲಿಸಿ ಕಠಿಣ ಅಧ್ಯಯನ ಮಾಡಿ ಉತ್ತಮ ಅಂಕ ಗಳಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಾಸವಿ ಸೆಂಟ್ರಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ ಉನ್ನತ್ತ ಶ್ರೇಣಿಯಲ್ಲಿ ತೇರ್ಗಡೆಯಾದ ಎಂ.ಬಿ.ಚಿನ್ಮಯಾಚಾರ್, ಆರ್.ತನ್ವಿ, ಕೆ.ಅಮೂಲ್ಯಾ, ಎಸ್.ಎಸ್.ಹೇಮಶ್ರೀ, ಎಚ್.ಎಸ್.ಪವಿತ್ರಾ, ಬಾಂಧವ್ಯ ಆಚಾರ್ಯ ಅವರಿಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಶಾಸಕರು ಸನ್ಮಾನಿಸಿದರು.
ನಗರ ಯೋಜನ ಪ್ರಾಧಿಕಾರದ ನಿರ್ದೇಶಕಿ ಸರಿತಾ ಜವರಪ್ಪ, ಕಾಂಗ್ರೆಸ್ ಮುಖಂಡರಾದ ಹೊಸಕೋಟೆ ಎಚ್.ಪಿ.ಶಿವಕುಮಾರ್, ಮಂಚನಹಳ್ಳಿ ಧನು, ಸಮಾಜ ಸೇವಕ ಕೆ.ವಿ.ಜಯಣ್ಣ, ಪಾಲಕರಾದ ಶಾಂತಕುಮಾರಿ, ಕುಮಾರ್, ಹರ್ಷಿತ್, ಲತಾ, ನಿವೃತ್ತ ಶಿಕ್ಷಕ ಪ್ರಕಾಶ್ ಮತ್ತಿತರರು ಇದ್ದರು.