

ಬೆಂಗಳೂರು: ಅಕ್ರಮ ನೋಂದಣಿ ತಡೆ, ರೈತರಿಗೆ ನೆರವು ನೀಡಲು ಉದ್ದೇಶಿತ ಪಹಣಿಗಳಿಗೆ ಆಧಾರ್ ಜೋಡಣೆ ಗುರಿ ಸಾಧನೆ ಸಾಧ್ಯವಾಗಿದ್ದು, ತ್ವರಿತ ಕಾರ್ಯಸಾಧನೆಗೆ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಗೌರವ ಸಂಭಾವನೆ ನಿಗದಿಪಡಿಸಿ ಆದೇಶಿಸಿದೆ. ಪ್ರತಿ ಒಂದು ಆಧಾರ್ ಜೋಡಣೆಗೆ ತಲಾ ಒಂದು ರೂ. ಸಂಭಾವನೆ ನೀಡಬೇಕೆಂದು ನಿರ್ಧರಿಸಿ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ಜ.31ರವರೆಗೆ 2.22 ಕೋಟಿ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಸಾಧ್ಯವಾಗಿದೆ. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಹಲವು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೂ ಸುರಕ್ಷಾ ಯೋಜನೆಯಡಿ ಈಗಾಗಲೇ ಪಿಎಫ್ಎಂಎಸ್ ಮೂಲಕ ಬಿಡುಗಡೆ ಮಾಡಿದ ಅನುದಾನದಲ್ಲಿ 4.45 ಕೋಟಿ ರೂ.ಗಳನ್ನು ಗೌರವ ಸಂಭಾವನೆ ಪಾವತಿಗೆ ಬಳಸಬೇಕು ಎಂದು ನಿರ್ಧರಿಸಿ ಮಾರ್ಗಸೂಚಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. ಒಂದು ಸಾವಿರ ಆಧಾರ್ ಜೋಡಣೆಗೆ ಎರಡು ಸಾವಿರ ರೂ. ನೀಡಲಾಗುತ್ತಿದೆ. ಈ ಪೈಕಿ ಆಯಾ ಕಂದಾಯ ವೃತ್ತದ ಒಬ್ಬ ಗ್ರಾಮ ಅಡಳಿತ ಅಧಿಕಾರಿ, ಗ್ರಾಮ ಸಹಾಯಕರಿಗೆ ತಲಾ ಒಂದು ಸಾವಿರ ರೂ. ಪಾವತಿಸಲಾಗುತ್ತದೆ. ಫೆ.21ರೊಳಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.