

ಮಡಿಕೇರಿ: ಕೊಡವ, ಕನ್ನಡ ಮತ್ತು ಇಂಗ್ಲೀಷ್ ಭಾಷಾ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬೇಕೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಒತ್ತಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಮನವಿ ಸಲ್ಲಿಸಿರುವ ಅವರು, ಕೊಡಗಿನ ನಿವಾಸಿಯಾದ ಬಾಚರಣಿಯಂಡ ಪಿ.ಅಪ್ಪಣ್ಣ ಅವರು, ಕೊಡವ, ಕನ್ನಡ ಹಾಗೂ ಇಂಗ್ಲಿಷ್ ಭಾಷಾ ಪಂಡಿತರು, ಭಾಷೆಯ ಉಗಮ, ಬೆಳವಣಿಗೆ, ಅದರ ಪ್ರಬೇಧಗಳು, ಕೊಡವ ಭಾಷೆ ವ್ಯಾಕರಣ, ಉಚ್ಛಾರಣೆ ಇತ್ಯಾದಿಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಕೊಡವರ ಜನಪದ ಕಲೆಗಳು, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಪದ್ಧತಿ-ನಂಬಿಕೆಗಳು, ಕೊಡಗಿನ ಇತಿಹಾಸ ಅಂತೆಯೇ ಅದರ ಪೌರಾಣಿಕ ಹಿನ್ನೆಲೆ ಕೊಡವರ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೆ ಅನುಸರಿಸಲಾಗುವ ಪದ್ಧತಿ, ಆಚಾರ-ವಿಚಾರಗಳ ಕುರಿತು, ಅಪಾರ ಮಾಹಿತಿ, ಜ್ಞಾನ ಹಾಗೂ ಉಪಯುಕ್ತ ಒಳನೋಟಗಳನ್ನು ಹೊಂದಿರುವ ಅಪ್ಪಣ್ಣರವರು ಒಂದು ಜ್ಞಾನಕೋಶವಿದ್ದಂತೆ ಎಂದು ವಿವರಿಸಿದ್ದಾರೆ.
ಕೊಡವ ಪಠ್ಯ ಪುಸ್ತಕವನ್ನು ಕೂಡ ಬರೆದಿದ್ದು, ತ್ರಿಭಾಷಾ ಸಾಹಿತಿ ಎಂದು ಗುರುತಿಸಿಕೊಂಡಿದ್ದಾರೆ. ಈಗಾಗಲೇ ಸುಮಾರು ೧೬ ಪುಸ್ತಕಗಳನ್ನು ಬರೆದು ಪ್ರಕಟಗೊಳಿಸಿದ್ದಾರೆ. ಸಂಘ-ಸಂಸ್ಥೆಗಳು, ಪಿ.ಹೆಚ್.ಡಿ ವಿದ್ಯಾರ್ಥಿಗಳು, ಹೊಸ ಬರಹಗಾರರು ಸೇರಿದಂತೆ ಎಲ್ಲರಿಗೂ ಉತ್ತಮ ಮಾರ್ಗದರ್ಶಕರಾಗಿದ್ದಾರೆ.
ಕೊಡಗಿನವರಾದ ಬಾಚರಣಿಯಂಡ ಅಪ್ಪಣ್ಣ ಸೇರಿದಂತೆ ನಿವೃತ್ತ ಸೇನಾಧಿಕಾರಿಗಳು, ಮಹಾವೀರ ಚಕ್ರ ಪುರಸ್ಕೃತ ಯೋಧರು, ಮಾಜಿ ಸೈನಿಕರು, ಕ್ರೀಡಾಪಟುಗಳು, ಸಾಹಿತಿಗಳು, ಕೃಷಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಗೌರವ ಡಾಕ್ಟರೆಟ್ ನೀಡಲು ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪರಿಗಣಿಸಿರುವುದಿಲ್ಲ. ಆದ್ದರಿಂದ ಈ ಬಾರಿಯಾದರೂ ಗೌರವ ಡಾಕ್ಟರೆಟ್ ನೀಡುವಾಗ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರನ್ನು ಪರಿಗಣಿಸಬೇಕೆಂದು ಬೊಳ್ಳಜಿರ ಅಯ್ಯಪ್ಪ ಮನವಿ ಮಾಡಿದ್ದಾರೆ.