ಈಕೆಯ ಸಾಧನೆಗೆ ಆರನೇ ತರಗತಿಯಲ್ಲಿದ್ದಾಗಲೇ ಒಲಿಯಿತು ಗೌರವ ಡಾಕ್ಟರೇಟ್!

ಗೌರವ ಡಾಕ್ಟರೇಟ್
Published on

ಚನ್ನಗಿರಿ: ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ. ಸ್ಪಷ್ಟವಾದ ಗುರಿ ಮತ್ತು ಆತ್ಮವಿಶ್ವಾಸವೊಂದಿದ್ದರೆ ಯಾರೂ ಬೇಕಾದರೂ ಅಂದುಕೊಂಡಿದ್ದನ್ನು ಸಾಧಿಸಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಆರನೇ ತರಗತಿ ವಿದ್ಯಾರ್ಥಿನಿ ಇಂಚರಾ.

ಕರೊನಾ ಸಮಯದಲ್ಲಿ ಸಿಕ್ಕ ಬಿಡುವನ್ನು ಈಕೆ ಸದುಪಯೋಗ ಪಡಿಸಿಕೊಂಡು, ಈ ಅವಧಿಯಲ್ಲಿ 18 ಪುಸ್ತಕಗಳನ್ನು ರಚಿಸಿದ್ದಾಳೆ. ಈಕೆಯ ಬರಹಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿವೆ. ಇದೀಗ ಚೆನ್ನೈ ಏಷ್ಯನ್ ವೈದಿಕ್ ಕಲ್ಚರ್ ರೀಸರ್ಚ್ ವಿಶ್ವವಿದ್ಯಾಲಯ ಜೂನಿಯರ್ ಸ್ಟೋರಿ ರೈಟರ್ ಹಾಗೂ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈ ಮೂಲಕ ಸಣ್ಣ ವಯಸ್ಸಿನಲ್ಲೇ ಗೌರವ ಡಾಕ್ಟರೇಟ್ ಪದವಿ ಪಡೆದ ಹೆಗ್ಗಳಿಕೆಗೆ ಇಂಚರಾ ಪಾತ್ರಳಾಗಿದ್ದಾಳೆ.

ಗ್ರಾಮದ ಚಂದ್ರಪ್ಪ ಮತ್ತು ಉಮಾ ದಂಪತಿ ಪುತ್ರಿ ಇಂಚರಾಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್, ಕಲಾಮ್ಸ್ ವರ್ಲ್ಡ್ ರೆಕಾರ್ಡ್, ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ ಮತ್ತು ಅರಳು ಮಲ್ಲಿಗೆ ಪ್ರಶಸ್ತಿಗಳು ಲಭಿಸಿವೆ.

ತನಗೆ ಒಲಿದು ಬಂದಿರುವ ಗೌರವದ ಬಗ್ಗೆ ಇಂಚರಾ ಪ್ರತಿಕ್ರಿಯಿಸಿ, ಧೈರ್ಯ, ಶಕ್ತಿ, ಶ್ರದ್ಧೆ ಮತ್ತು ಅರಿವು ಇದ್ದರೆ ಪ್ರತಿಯೊಬ್ಬರು ಸಾಧಿಸಬಹುದು. ಮನೆ ಮತ್ತು ಮಠದ ಸಂಸ್ಕಾರದಿಂದ ಬೆಳೆದ ನನಗೆ ಗೌರವ ಡಾಕ್ಟರೇಟ್ ದೊರೆತಿರುವುದು ಸಂತಸವಾಗಿದೆ ಎಂದ ಹೇಳಿಕೊಂಡಿದ್ದಾಳೆ.

ಶ್ರೀಮಠದ ಪರಂಪರೆಯಲ್ಲಿ ಉತ್ತಮ ಜ್ಞಾನ ಮತ್ತು ಸಂಸ್ಕಾರವನ್ನು ಪಡೆದು, 18 ಕೃತಿಗಳನ್ನು ರಚಿಸಿದ್ದಾಳೆ. ಇದಕ್ಕೆ ಅವಳ ತಾಯಿ ಮಾರ್ಗದರ್ಶನ ಮುಖ್ಯವಾಗಿದೆ. ಪ್ರಶಸ್ತಿ ಮತ್ತು ಡಾಕ್ಟರೇಟ್ ಗೌರವ ಚಿಕ್ಕ ವಯಸ್ಸಿಗೆ ದೊರೆತಿರುವುದು ಶ್ಲಾಘನೀಯ, ಇದರಿಂದ ಮಠ, ಗ್ರಾಮ ಮತ್ತು ಜಿಲ್ಲೆಗೆ ಕೀರ್ತಿ ಬಂದಿದೆ.
-ಡಾ. ಶ್ರೀ ಗುರುಬಸವ ಸ್ವಾಮೀಜಿ
ಪಾಂಡೋಮಟ್ಟಿ ವಿರಕ್ತಮಠ, ಚನ್ನಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net