

ನ್ಯಾಮತಿ, ಹೊನ್ನಾಳಿ: ಅವಳಿ ತಾಲೂಕಿನಲ್ಲಿ ಸೋಮವಾರ ತಡ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಸುರಿದ ಭಾರಿ ಮಳೆಯಿಂದ ಅಪಾರದ ಪ್ರಮಾಣದ ಬೆಳೆ ಹಾನಿಯಾಗಿದೆ.
ಕಳೆದ ತಿಂಗಳು ಸುರಿದ ಸತತ ಮಳೆಗೆ ಕೆರೆ, ಹಳ್ಳ, ಕೊಳ್ಳ ತುಂಬಿದ್ದವು. ಇಂದು ತೋರಿದ ವರ್ಣನ ಆರ್ಭಟಕ್ಕೆ ಹೊಲ, ಗದ್ದೆಗಳು ತುಂಬಿ ಕೆರೆಗಳಂತಾಗಿ ಕಣ್ಣು ಹಾಯಿಸಿದ ಕಡೆ ಜಲರಾಶಿಯೇ ಕಾಣುತ್ತಿತ್ತು.
ನ್ಯಾಮತಿಯ ಯರಗನಾಳು, ರಾಮೇಶ್ವರ, ಬೆಳಗುತ್ತಿ, ಮಲ್ಲಿಗೇನಹಳ್ಳಿ, ಕೆಂಚಿಕೊಪ್ಪ, ಆರುಂಡಿ, ಮಾದನಬಾವಿ, ದಾನಿಹಳ್ಳಿ ಗ್ರಾಮಗಳ ಹಳ್ಳಗಳ ಸಮೀಪದ ಜಮೀನುಗಳು ಜಲಾವೃತವಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಯರಗನಾಳು ಗ್ರಾಮದ ಗೌಡನಕೆರೆ ಕೋಡಿಬಿದ್ದು, ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಹೊನ್ನಾಳಿ ಹನುಮಸಾಗರ ಸಮೀಪ ರಾಜ್ಯ ಹೆದ್ದಾರಿ ಕುಸಿದಿದ್ದು, ಸಂಚಾರ ಬಂದ್ ಆಗಿದೆ. ಇತ್ತ ಹೊನ್ನಾಳಿ ಹಾಗೂ ನ್ಯಾಮತಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಬಲಮುರಿ-ಎಚ್.ಗೋಪಗೊಂಡನಹಳ್ಳಿ ಸೇತುವೆ ಮುಳುಗಿದೆ.
ತಹಸೀಲ್ದಾರ್ ರಶ್ಮಿ ಅವರು ಬೆಳಗ್ಗೆ ತಾಲೂಕಿನ ಹನುಮಸಾಗರ, ನರಸಗೊಂಡನಹಳ್ಳಿ, ಮಾಸಡಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಡೆ ರಾತ್ರಿ ಮಳೆ ಸುರಿದು ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಸಂಕಷ್ಟ ಅನುಭವಿಸಿದರು. ಕೆಲವರು ಇಡೀ ರಾತ್ರಿ ಮನೆಯಿಂದ ಹೊರಗೆ ನೀರು ಸಾಗಿಸುವ ಪ್ರಯತ್ನ ನಡೆಸಿದರು.
ಎಚ್.ಗೋಪಗೊಂಡನಹಳ್ಳಿಯಲ್ಲಿ ಮಂಗಳವಾರ ನಡೆದ ಗ್ರಾಮ ವಾಸ್ತವ್ಯಕ್ಕೆ ಹಾಕಲಾಗಿದ್ದ ಶಾಮಿಯಾನ ಹಾಗೂ ಚೇರ್‌ಗಳು ಚಿಲ್ಲಾಪಿಲ್ಲಿಯಾಗಿವು. ಶಾಲಾ ಕಾಂಪೌಂಡ್ ಸಹ ಕುಸಿದಿದೆ.
ಕಳೆದ ಮೂರು ದಶಕದಲ್ಲೇ ಇಂತಹ ಮಳೆ ಕಂಡಿರಲಿಲ್ಲ. ನೆರೆ ಹಾವಳಿ ಬಂದಾಗ ಕೂಡ ಇಂತಹ ದೊಡ್ಡ ಪ್ರಮಾಣದ ಮಳೆ ಕಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದರು.