

ಹೊನ್ನಾಳಿ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತಿತರ ಕ್ಷೇತ್ರಗಳ ಬಗ್ಗೆ ನಾಡಪ್ರಭು ಕೆಂಪೇಗೌಡ ಅವರಿಗಿದ್ದ ದೂರದೃಷ್ಟಿ ಆಡಳಿತದ ಪರಿಕಲ್ಪನೆಗಳು ಎಲ್ಲ ತಲೆಮಾರಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಗುರುವಾರ ತಾಲೂಕು ಆಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದರು.
ಸರ್ಕಾರಗಳು ಮುಂದಿನ 25 ವರ್ಷಗಳ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಯೋಜನೆ ತಯಾರಿಸುತ್ತವೆ. ಆದರೆ, 16ನೇ ಶತಮಾನದಲ್ಲಿದ್ದ ಕೆಂಪೇಗೌಡರು ಮುಂದಿನ 2 ಸಾವಿರ ವರ್ಷಗಳ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದ್ದರು. ಈ ಕಾರಣಕ್ಕಾಗಿಯೇ ಬೆಂಗಳೂರು ಇಂದಿಗೂ ಜನವಾಸ ಯೋಗ್ಯ ನಗರವಾಗಿದೆ ಎಂದರು.
ಪ್ರಾಚಾರ್ಯ ಡಾ. ಧನಂಜಯ ಉಪನ್ಯಾಸ ನೀಡಿ, ಅಭಿವೃದ್ಧಿ ಎಂದರೆ ಉಚಿತ ಕೊಡುಗೆ ನೀಡಿ, ಜನರನ್ನು ಖುಷಿಪಡಿಸುವುದಲ್ಲ. ಬದಲಿಗೆ ಆರ್ಥಿಕ ಶಕ್ತಿ ನೀಡಿ, ಸ್ವಾವಲಂಬನೆ ಮಾಡುವುದಾಗಿದೆ. ಇಂತಹ ಕಾರ್ಯ ಅಂದಿನ ಕಾಲದಲ್ಲೇ ಕೆಂಪೇಗೌಡರು ಮಾಡಿದ್ದರು. ಇಂತಹ ಅಭಿವೃದ್ಧಿ ಮಾದರಿಗಳನ್ನು ಜನರಿಗೆ ನೀಡಬೇಕಾಗಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಅಂದಿನ ವಿಜಯನಗರ ಅರಸರಿಗೆ ನಿಷ್ಠಾವಂತರಾಗಿ, ಜನರಿಗೆ ದಕ್ಷ ಆಡಳಿತ ನೀಡಿದ ಹೆಗ್ಗಳಿಗೆ ಕೆಂಪೇಗೌಡ ಅವರದ್ದಾಗಿದೆ ಎಂದು ಹೇಳಿದರು.
ಪ್ರಭಾರಿ ಬಿಇಒ ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗಾಗಿ ಸರ್ಕಾರ ಒಂದು ಲಕ್ಷ ರೂ. ಅನುದಾನ ನೀಡಿದೆ ಎಂದರು.
ವಿವಿಧ ವೇಷಭೂಷಣ ತೊಟ್ಟ ಮಕ್ಕಳೊಂದಿಗೆ ಕೆಂಪೇಗೌಡ ಭಾವಚಿತ್ರ ಮೆರವಣಿಗೆ ನಡೆಯಿತು. ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಶಾಸಕರು ಬಹುಮಾನ ನೀಡಿ, ಪುರಸ್ಕರಿಸಿದರು.
ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ರಾಘವೇಂದ್ರ, ಪುರಸಭೆ ಅಧಿಕಾರಿ ನಿರಂಜನಿ, ಸಿಡಿಪಿಒ ಜ್ಯೋತಿ, ಕೃಷಿ ಅಧಿಕಾರಿ ಪ್ರತಿಮಾ, ತೋಟಗಾರಿಕಾ ಇಲಾಖೆ ಅಧಿಕಾರಿ ರೇಖಾ, ಅರಣ್ಯ ಇಲಾಖೆ ಅಧಿಕಾರಿ ಕಿಶೋರ್ ಇತರರಿದ್ದರು.