

ಹಾಂಕಾಂಗ್: ಧೂಮಪಾನ ಅಪಾಯಕಾರಿ. ಆದರೂ ಜನರು ಸಿಗರೇಟ್ಗೆ ಅಂಟಿಕೊಂಡಿರುತ್ತಾರೆ. ಈಗ, ಹಾಂಕಾಂಗ್ ಸರ್ಕಾರ, ಧೂಮಪಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಿದ್ದು ಅದು ಯಶಸ್ವಿಯೂ ಆಗುತ್ತಿದೆ ಎನ್ನಲಗುತ್ತಿದೆ. ತಂಬಾಕು ಮುಕ್ತ ನಗರವನ್ನು ರಚಿಸುವುದಾದರೆ, ಜನರು ಧೂಮಪಾನಿಗಳನ್ನು ತಿರಸ್ಕಾರದಿಂದ ನೋಡಬೇಕು ಎಂದು ಪ್ರದೇಶದ ಆರೋಗ್ಯ ಸಚಿವರು ಹೇಳಿದರು.
"ಸಿಗರೇಟುಗಳು ನಮ್ಮೆಲ್ಲರ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತವೆ" ಎಂದು ಪ್ರೊಫೆಸರ್ ಲೋ ಚುಂಗ್-ಮೌ ವಿಧಾನ ಪರಿಷತ್ತಿನ ಆರೋಗ್ಯ ಸೇವಾ ಸಮಿತಿಯ ಸಭೆಯಲ್ಲಿ ಹೇಳಿದ್ದರು. "ಧೂಮಪಾನ ನಿಷೇಧಿತ ಪ್ರದೇಶಗಳಲ್ಲಿ ಯಾರಾದರು ಧೂಮಪಾನ ಮಾಡುತ್ತಿರುವುದನ್ನು ಸಾರ್ವಜನಿಕರು ನೋಡಿದಾಗ, ಯಾವುದೇ ಕಾನೂನು ಜಾರಿ ಅಧಿಕಾರಿಗಳು ತಕ್ಷಣ ಕಾಣಿಸಿಕೊಳ್ಳಲು ಸಾಧ್ಯವಾಗದಿದ್ದರೂ, ನಾವು ಧೂಮಪಾನಿಗಳನ್ನು ದಿಟ್ಟಿಸಿ ನೋಡುತ್ತಾ ಅಲ್ಲೇ ನಿಲ್ಲಬಹುದು" ಎಂದು ಅವರು ಹೇಳಿದರು.
ಯಾರಾದರೂ ರೆಸ್ಟೋರೆಂಟ್ನಲ್ಲಿ ಸಿಗರೇಟ್ ಹೊರತೆಗೆದರೆ, ಆವರಣದಲ್ಲಿರುವ ಪ್ರತಿಯೊಬ್ಬರಿಗೂ ಆ ವ್ಯಕ್ತಿಯನ್ನು ದಿಟ್ಟಿಸಿ ನೋಡುತ್ತಿರಲು ಅವಕಾಶವಿದೆ ಎಂದು ಅವರು ಜನರಿಗೆ ತಿಳಿಸಿದರು. "ಆ ವ್ಯಕ್ತಿಯು ರೆಸ್ಟೋರೆಂಟ್ನಲ್ಲಿರುವ ಎಲ್ಲರನ್ನೂ ಎದುರು ಹಾಕಿಕೊಳ್ಳಲು ಧೈರ್ಯ ಮಾಡುತ್ತಾನೆ ಎಂದು ನಾನು ನಂಬುವುದಿಲ್ಲ" ಎಂದು ಅವರು ಹೇಳಿದರು.
ಈ ರೀತಿಯ ನಡವಳಿಕೆಯು "ಧೂಮಪಾನ ರಹಿತ ಸಂಸ್ಕೃತಿಯನ್ನು" ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಪ್ರೊಫೆಸರ್ ಲೋ ಹೇಳಿದ್ದಾರೆ. ಧೂಮಪಾನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಾರ್ವಜನಿಕರು ಒದಗಿಸಿದ ಕಣ್ಗಾವಲು ದೃಶ್ಯಾವಳಿಗಳನ್ನು ಬಳಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ಹಾಂಕಾಂಗ್ನ ಪ್ರಸ್ತುತ ಧೂಮಪಾನ ಸಂಬಂಧಿತ ಕಾನೂನುಗಳ ಪ್ರಕಾರ, ರೆಸ್ಟೋರೆಂಟ್ ಗಳು, ಕೆಲಸದ ಸ್ಥಳಗಳು ಮತ್ತು ಇತರ ಕೆಲವು ಸ್ಥಳಗಳಲ್ಲಿ ಧೂಮಪಾನ ಮಾಡಿದರೆ 22,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
ಈ ಮಧ್ಯೆ, ಯುರೋಪಿಯನ್ ಒಕ್ಕೂಟದಲ್ಲಿ ಧೂಮಪಾನದ ಅತ್ಯಂತ ಕಡಿಮೆ ಪ್ರಮಾಣವನ್ನು ಹೊಂದಿರುವ ಸ್ವೀಡನ್, ತನ್ನನ್ನು "ಸಿಗರೇಟ್ ಮುಕ್ತ" ಎಂದು ಘೋಷಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ತಜ್ಞರ ಪ್ರಕಾರ, ದಶಕಗಳ ಧೂಮಪಾನ ವಿರೋಧಿ ಅಭಿಯಾನಗಳು ಮತ್ತು ಶಾಸನಗಳು ಇದಕ್ಕೆ ಕಾರಣವಾಗಬಹುದು. (ಏಜೆನ್ಸೀಸ್)