ಆನೆ ದಾಳಿ ತಡೆಗೆ 'ಹನಿ' ಟ್ರ್ಯಾಪ್​! ಏನಿದು ಉಪಾಯ?

ವಿಜಯವಾಣಿ (6)
Published on

| ಸುನಿಲ್ ಪೊನ್ನೇಟಿ, ಮಡಿಕೇರಿ

ರಾಜ್ಯದ ಮಲೆನಾಡು ಜಿಲ್ಲೆಗಳನ್ನು ಕಾಡುತ್ತಿರುವ ಆನೆ-ಮಾನವ ಸಂಘರ್ಷ ತಡೆಗೆ ‘ಜೇನು ನೊಣದ ಬೇಲಿ’ ಬಳಕೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇದೊಂದು ಪರಿಣಾಮಕಾರಿ ವಿಧಾನ ಎನ್ನುವುದು ವಿಜ್ಞಾನಿಗಳ ಸಂಶೋಧನೆಯಲ್ಲೂ ಕಂಡುಬಂದಿದೆ. ಕೃಷಿಕರಿಗೂ ಅನುಕೂಲ ಆಗಬಹುದಾದ ಈ ಪ್ರಯೋಗದ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳಿರುವುದರಿಂದ ಸರ್ಕಾರದ ನಿರ್ಧಾರ ಏನು ಎಂಬುದು ಕುತೂಹಲ ಮೂಡಿಸಿದೆ. ಮೇ 31ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆಯಲ್ಲಿ ಹೆಚ್ಚುತ್ತಿರುವ ವನ್ಯಜೀವಿ-ಮಾನವ ಸಂಘರ್ಷದ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಿತು. ಈ ಸಂದರ್ಭ ರಾಜ್ಯದಲ್ಲಿ ಹಲವು ಕಡೆ ಮಾನವ-ಪ್ರಾಣಿ ಸಂಘರ್ಷದ ವೇಳೆ ಪ್ರಾಣಹಾನಿ ಆಗಿರುವ ಬಗ್ಗೆ ಮತ್ತು ಇದಕ್ಕೆ ವೈಜ್ಞಾನಿಕ ಪರಿಹಾರ ಒದಗಿಸುವ ಬಗ್ಗೆಯೂ ಗಂಭೀರ ಚರ್ಚೆ ಆಯಿತು.

ಈ ವೇಳೆ ಸಭೆಯಲ್ಲಿದ್ದ ಸಚಿವ ಸಂತೋಷ್ ಲಾಡ್ ಆನೆ ಹಾವಳಿ ತಡೆಗೆ ‘ಜೇನು ನೊಣದ ಬೇಲಿ’ ಬಳಕೆಯನ್ನು ಪ್ರಸ್ತಾಪಿಸಿದರು. ಆನೆ ಹಾವಳಿಗೆ ಯಶಸ್ವಿಯಾಗಿ ಕಡಿವಾಣ ಹಾಕಬಹುದಾದ ಈ ಜೈವಿಕ ವಿಧಾನದ ಬಗ್ಗೆ ಸಿಎಂಗೆ ವಿವರ ನೀಡಿದರು. ವಿಶೇಷ ಎಂದರೆ ಈ ವಿಧಾನದ ಬಗ್ಗೆ ದೇಶದಲ್ಲೇ ಮೊದಲ ಬಾರಿಗೆ ಕೊಡಗಿನಲ್ಲಿ ಈಗಾಗಲೇ ವೈಜ್ಞಾನಿಕ ಅಧ್ಯಯನ ನಡೆದಿದ್ದು, ಆನೆ ಹಾವಳಿ ತಡೆಗಟ್ಟುವಲ್ಲಿ ಶೇ.70 ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ. ಕೀನ್ಯಾ, ಶ್ರೀಲಂಕಾ ಸೇರಿ ಆನೆಗಳ ಸಂಖ್ಯೆ ಹೆಚ್ಚು ಇರುವ ದೇಶಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಅಲ್ಲಿ ‘ಜೇನು ನೊಣದ ಬೇಲಿ’ಗೆ ಹೆಚ್ಚು ಆಕ್ರಮಣಕಾರಿ ತಳಿಯ ಜೇನುನೊಣಗಳನ್ನು ಬಳಸಲಾಗುತ್ತಿದೆ. ಕೊಡಗಿನಲ್ಲಿ ‘ಎಪೀಸ್ ಸಿರೇನಾ’ ಜಾತಿಯ ಅಷ್ಟೊಂದು ಆಕ್ರಮಣಕಾರಿ ಅಲ್ಲದ ಭಾರತೀಯ ಜೇನು ನೊಣಗಳನ್ನು ಬಳಸಿ ಕಾಡಾನೆ ಹಾವಳಿ ತಡೆಗಟ್ಟುವ ಯೋಜನೆ ಬಗ್ಗೆ ಅಧ್ಯಯನ ನಡೆಸಲಾಗಿದೆ.

ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಜೇನು ನೊಣ ಬಳಕೆಯಿಂದ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ (ರಿ-ಹಾಬ್) ಎನ್ನುವ ಯೋಜನೆಯನ್ನು 2021ರಲ್ಲಿ ರೂಪಿಸಿತ್ತು. ಪೊನ್ನಂಪೇಟೆ ತಾಲೂಕು ನಾಣಚ್ಚಿ ಭಾಗದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು, ಅರಣ್ಯ ದಾಟಿ ಬರುವ ಆನೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನದ ಪ್ರಯೋಗ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆಸಲಾಗಿತ್ತು. ರಿ-ಹಾಬ್ ಯೋಜನೆಯ ಪ್ರಧಾನ ಸಂಶೋಧಕ ಡಾ. ಆರ್.ಎನ್. ಕೆಂಚರೆಡ್ಡಿ ಪ್ರಯೋಗದ ನೇತೃತ್ವ ವಹಿಸಿದ್ದರು. ಆರಂಭದಲ್ಲಿ 6 ಕಡೆಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಈ ಪ್ರಯೋಗ ನಡೆಸಲಾಗಿತ್ತು. ಈ ಜೇನು ಪೆಟ್ಟಿಗೆಗಳನ್ನು ಇಟ್ಟಿರುವ ಜಾಗ ಬಳಸದೆ ಬೇರೆ ದಾರಿಯನ್ನು ಆನೆಗಳು ಬಳಸಿರುವುದೂ ಕಂಡುಬಂದಿತ್ತು. ನಂತರ ಜಿಲ್ಲೆಯ ಎಂಟು ಸ್ಥಳಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಮತ್ತಷ್ಟು ಅಧ್ಯಯನ ಮಾಡಲಾಗಿದೆ.

ಮೊದಲು ಆನೆಗಳು ಜೇನು ಪೆಟ್ಟಿಗೆಗಳನ್ನೇ ಹಾಳು ಮಾಡಲು ಪ್ರಯತ್ನಿಸಿದ್ದವು. ಆದರೆ ಜೇನು ನೊಣಗಳ ಮುಂದೆ ಆನೆಗಳ ಆಟ ನಡೆಯಲಿಲ್ಲ. ಅವು ತಮ್ಮ ಮೂಲ ಕಾರಿಡಾರ್ ಅನ್ನೇ ಬದಲಿಸಿರುವುದು ಪ್ರಯೋಗಗಳಲ್ಲಿ ಕಂಡುಬಂದಿದೆ. ಮೊದಲು 4 ಅಡಿ ಅಂತರದಲ್ಲಿ ಜೇನು ಪಟ್ಟಿಗೆಗಳನ್ನು ಇಡಲಾಗುತ್ತಿತ್ತು. ನಂತರ ಇದನ್ನು 3 ಅಡಿಗೆ ಇಳಿಸಿ ನೋಡಿದಾಗ ಸಾಕಷ್ಟು ಯಶಸ್ಸು ಕಂಡಿದೆ ಎನ್ನುತ್ತಾರೆ ಕೆಂಚರೆಡ್ಡಿ.

ಹಲವು ಪ್ರಯೋಜನ

ಆನೆ-ಮಾನವ ಸಂಘರ್ಷ ತಡೆಯಲು ಅಲ್ಲಲ್ಲಿ ನೈಸರ್ಗಿಕ ವಿಧಾನಗಳ ಪ್ರಯೋಗವೂ ನಡೆಯುತ್ತಿದೆ. ಅರಣ್ಯದೊಳಗೆ ಹೊಂಡಗಳನ್ನು ತೋಡಿ ಅಲ್ಲಿಯೇ ಆನೆಗಳಿಗೆ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದು, ಅರಣ್ಯದಂಚಿನಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಕಬ್ಬು, ಬಾಳೆ, ಜೋಳ ಮತ್ತಿತರ ಬೆಳೆಗಳನ್ನು ಬೆಳೆದು ಇವುಗಳು ಕಾಡಿನಿಂದ ಹೊರಗೆ ಹೋಗದಂತೆ ತಡೆಯುವುದು, ಅರಣ್ಯ ಮತ್ತು ಜನವಸತಿ ಪ್ರದೇಶಗಳ ಮಧ್ಯೆ ಆನೆಗಳಿಗೆ ಹಿಡಿಸದ ಘಾಟು ಸಸ್ಯಗಳನ್ನು ಬೆಳೆಯುವುದು, ಮೆಣಸಿನ ಹೊಗೆ ಹೊರಹಾಕುವುದು ಮತ್ತಿತರ ಪ್ರಯತ್ನಗಳೂ ನಡೆಯುತ್ತಿವೆ. ಇದರಿಂದಲೂ ಆನೆ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ. ಇವುಗಳ ಮಧ್ಯೆ ಜೇನು ನೊಣದ ಬೇಲಿ ಬಳಕೆ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅರಣ್ಯದಂಚಿನ ರೈತರು, ಬೆಳೆಗಾರರು ತೋಟ, ಗದ್ದೆಯ ಬೇಲಿಗಳಲ್ಲಿ ಜೇನು ಪೆಟ್ಟಿಗೆ ಇಡುವುದರಿಂದ ಜೇನು ತುಪ್ಪ ಉತ್ಪಾದಿಸಿ ಮಾರಾಟ ಮಾಡುವ ಅವಕಾಶ ಇದೆ. ಮೇಣವನ್ನೂ ಮಾರಬಹುದು. ಜೇನು ಹುಳುಗಳು ಪರಾಗಸ್ಪರ್ಶಕ್ಕೆ ಹೆಚ್ಚು ಸಹಕಾರ ನೀಡುವುದರಿಂದ ಕಾಫಿ, ಭತ್ತ ಸೇರಿ ವಿವಿಧ ಬೆಳೆಗಳ ಉತ್ಪಾದನೆಯೂ ಹೆಚ್ಚಾಗಲಿದೆ.

ಹನಿ ಟ್ರ್ಯಾಪ್​ ಪ್ರಯೋಗ ಹೇಗೆ?

ರಿ-ಹಾಬ್ ಯೋಜನೆಯಲ್ಲಿ ಅತಿ ಹೆಚ್ಚು ಆನೆ ಹಾವಳಿ ಇರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಡಲಾಗಿತ್ತು. ಮರದ ಮೇಲೆ ಅಥವಾ ನೆಲದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಪೆಟ್ಟಿಗೆಗಳ ಮಧ್ಯೆ ತಂತಿಯನ್ನು ಅಳವಡಿಸಲಾಗುತ್ತದೆ. ಪೆಟ್ಟಿಗೆಗಳ ಮಧ್ಯೆ ಆನೆ ದಾಟುವಾಗ ತಂತಿ ಸ್ಪರ್ಶಿಸಿದ ಕೂಡಲೇ ಪೆಟ್ಟಿಗೆಯಲ್ಲಿರುವ ಜೇನು ನೊಣಗಳು ಭಾರಿ ಶಬ್ದದೊಂದಿಗೆ ದಾಳಿಗೆ ಮುಂದಾಗುತ್ತವೆ. ಈ ಸಂದರ್ಭದಲ್ಲಿ ಆನೆಯ ಸೂಕ್ಷ್ಮ ಭಾಗಗಳಿಗೆ ಜೇನು ನೊಣಗಳು ಕಚ್ಚುವ ಭಯದಿಂದ ಪಲಾಯನ ಮಾಡುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶ. ಇದರ ಆಧಾರದಲ್ಲೇ ಜೇನು ನೊಣದ ಬೇಲಿ ಪ್ರಯೋಗ ನಡೆಸಲಾಗಿದೆ. ಎಲ್ಲ ಕಡೆ ವಿಡಿಯೋ ಕ್ಯಾಮರಾ ಇಟ್ಟು ಆನೆಗಳ ಚಲನವಲನ, ಜೇನು ನೊಣಗಳ ಪ್ರತಿಕ್ರಿಯೆ ಹೀಗೆ ವಿವಿಧ ವಿಷಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗಿದೆ.

ಆನೆಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ಈ ಪ್ರಯೋಗ ಶೇ.70 ಯಶಸ್ವಿಯಾಗಿರುವುದು ಅಧ್ಯಯನಗಳ ಮೂಲಕ ಕಂಡುಬಂದಿದೆ. ಆನೆಗಳು ವೇಗವಾಗಿ ಹೋಗಬಹುದಾದ ಜಾಗಗಳಲ್ಲಿ ಜೇನುಹುಳದ ಬೇಲಿ ಅಷ್ಟೇನೂ ಉಪಯೋಗಕ್ಕೆ ಬರುವುದಿಲ್ಲ. ಆದರೆ ದಟ್ಟ ಕಾಡು, ಆನೆ ಕಡಂಗ, ವೇಗವಾಗಿ ಚಲಿಸಲು ಸಾಧ್ಯವಿರದ ಪ್ರದೇಶಗಳಲ್ಲಿ ಪ್ರಯೋಗಕ್ಕೆ ಫಲ ಸಿಕ್ಕಿದೆ ಎನ್ನುತ್ತಾರೆ ಸಂಶೋಧಕರು. ಈ ಸಂಬಂಧ ಅಧ್ಯಯನ ವರದಿಯನ್ನು ಈಗಾಗಲೇ ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೂ ಸಲ್ಲಿಸಲಾಗಿದೆ.

ಆನೆ-ಮಾನವ ಸಂಘರ್ಷ ತಡೆಯಲು ಜೇನು ನೊಣದ ಬೇಲಿ ವೈಜ್ಞಾನಿಕ ಪರಿಹಾರವಾಗಿದೆ. ಆನೆಗಳು ಜೇನುನೊಣ ಇರುವ ಪ್ರದೇಶಕ್ಕೆ ಬರುವುದಿಲ್ಲ. ಹೀಗಾಗಿ ಆನೆ ಬ್ಯಾರಿಕೇಡ್ ಹಾಕಿರುವ ಮಾರ್ಗದುದ್ದಕ್ಕೂ ಜೇನು ಕೃಷಿ ಮಾಡಿದರೆ ರೈತರಿಗೂ ಅನುಕೂಲ, ಆನೆಗಳ ಕಾಟವೂ ತಪ್ಪುತ್ತದೆ. | ಸಂತೋಷ್ ಲಾಡ್, ಕಾರ್ವಿುಕ ಸಚಿವ ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಿಣಾಮಕಾರಿ ಜೈವಿಕ ವಿಧಾನವಾಗಿ ಜೇನು ನೊಣದ ಬೇಲಿ ಶೇ.70 ಯಶಸ್ವಿಯಾಗಿದೆ. ನಮ್ಮ ಪ್ರಯೋಗದ ನಂತರ ಅರಣ್ಯದಂಚಿನ ರೈತರಿಗೆ ವಿಧಾನ ಅನುಸರಿಸುವ ಸಲಹೆ ನೀಡಿದ್ದು, ಬಹಳಷ್ಟು ಕಡೆಗಳಲ್ಲಿ ಜೇನು ನೊಣದ ಬೇಲಿ ಅಳವಡಿಸಿಕೊಂಡು ಆನೆಗಳ ಹಾವಳಿಯಿಂದ ಪಾರಾಗಿದ್ದಾರೆ. | ಡಾ. ಆರ್.ಎನ್. ಕೆಂಚರೆಡ್ಡಿ ಪ್ರಧಾನ ಸಂಶೋಧಕ, ರಿ-ಹಾಬ್ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net