ಆಪತ್ಬಾಂಧವ ಗೃಹರಕ್ಷಕರು; ಇಂದು ಗೃಹರಕ್ಷಕ ದಳ ದಿನ

Home Guard
Published on

ಡಾ.ಮುರಲೀ ಮೋಹನ್ ಚೂಂತಾರು
ಗೃಹರಕ್ಷಕ ದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರ, ಶಿಸ್ತುಬದ್ಧ, ಸಮವಸ್ತ್ರಧಾರಿ ಸ್ವಯಂಸೇವಕರ ಸೇವಾಸಂಸ್ಥೆ. ನಿಷ್ಕಾಮ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ದೇಶದ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಜೀವದ ರಕ್ಷಣೆ ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು. ದೇಶದ ಗಡಿಗಳಲ್ಲಿ ಹೇಗೆ ಸೈನಿಕರು ನಮ್ಮ ದೇಶವನ್ನು ವೈರಿಗಳಿಂದ ರಕ್ಷಿಸುತ್ತಾರೋ ಹಾಗೆಯೇ ನಮ್ಮ ದೇಶದೊಳಗೆ ಇದ್ದುಕೊಂಡು ದೇಶದೊಳಗೆ ನಡೆಯುವ ದೇಶದ್ರೋಹಿ ಚಟುವಟಿಕೆಗಳನ್ನು ಅಥವಾ ಇನ್ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸುತ್ತ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಂದೇಶ ನೀಡುವ ನಿಸ್ವಾರ್ಥ ಸ್ವಯಂಸೇವಕರೇ ಹೆಮ್ಮೆಯ ಗೃಹರಕ್ಷಕರು.

ದೇಶದಲ್ಲಿ ಯಾವುದಾದರೂ ಪ್ರಾಕೃತಿಕ ವಿಕೋಪ ಮತ್ತು ಮಾನವ ನಿರ್ವಿುತ ದುರಂತಗಳಾದ ಸಂದರ್ಭ ಮುನ್ನೆಲೆಯಲ್ಲಿ ನಿಂತು ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತಕ್ಕೆ ಸದಾ ಸಹಕಾರ ನೀಡುವ ಆಪತ್ಬಾಂಧವರು ಇವರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಹಿಟ್ಲರ್​ನ ನಾಜಿ ಸೈನ್ಯವನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಮಿಲಿಟ್ರಿ ಪಡೆಗೆ ಸಮಾನವಾಗಿ ಕೆಲಸ ಮಾಡಲು ಮತ್ತು ಸಹಕರಿಸಲು ಪರ್ಯಾಯವಾಗಿ ಬ್ರಿಟನ್ ದೇಶದ ಜನ ಸ್ಥಳೀಯ ರಕ್ಷಣಾ ಪಡೆ (ಔಈ ಅಂದರೆ ಔಟ್ಚಚ್ಝ ಛಛ್ಛಿಛ್ಞಿ್ಚ ಡಟ್ಝuಠಿಛಿಛ್ಟಿ) ಎಂದು ಗುರುತಿಸಿಕೊಂಡು ದೇಶದ ರಕ್ಷಣೆಗೆ ಮುಂದಾದರು. 1940ರ ಮೇ 14ರಂದು ಬ್ರಿಟನ್ ರೇಡಿಯೋಗಳಲ್ಲಿ ಸ್ಥಳೀಯ ರಕ್ಷಣಾ ಕಾರ್ಯಕರ್ತರಾಗಿ ಸೇರಲು ಸಂದೇಶ ನೀಡಲಾಯಿತು. ಆಗಸ್ಟ್ 23ರಂದು ವಿನ್ಸೆಂಟ್ ರ್ಚಚಿಲ್ ಸ್ಥಳೀಯ ಕಾರ್ಯಕರ್ತರನ್ನು ‘ಹೋಮ್ಾರ್ಡ್’ ಎಂದು ಮರುನಾಮಕರಣ ಮಾಡಿದರು. ನಮ್ಮ ದೇಶದಲ್ಲಿ ಮುಂಬೈನಲ್ಲಿ 1946ರಲ್ಲಿ ದೇಶ ರಕ್ಷಣೆಗಾಗಿ ನೌಕಾದಳ, ಭೂಸೇನೆ ಮತ್ತು ವಾಯುದಳಕ್ಕೆ ಸಹಾಯ ಮಾಡಲು ಮತ್ತು ತುರ್ತಸಂದರ್ಭಗಳಲ್ಲಿ ದೇಶ ರಕ್ಷಣೆ ಮಾಡುವ ಉದ್ದೇಶದಿಂದ ಡಿಸೆಂಬರ್ 6ರಂದು ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆ ಅಸ್ತಿತ್ವಕ್ಕೆ ಬಂತು. ಈ ಕಾರಣಗಳಿಂದ ಡಿ.6ರಂದು ಗೃಹರಕ್ಷಕ ರೈಸಿಂಗ್ ದಿನ ಅಥವಾ ಗೃಹರಕ್ಷಕರ ದಿನ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಮುರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದಾಗ ಗೃಹರಕ್ಷಕ ದಳವನ್ನು ಗೃಹ ಇಲಾಖೆಯ ಅಡಿಯಲ್ಲಿ ಸೇರಿಸಿ, ಗೃಹರಕ್ಷಕ ಕಾಯ್ದೆ ಹಾಗೂ ಕಾನೂನು ಜಾರಿಗೊಳಿಸಲಾಯಿತು. ಮುಂದೆ ಕ್ರಮೇಣ ದೇಶದೆಲ್ಲೆಡೆ ಗೃಹರಕ್ಷಕ ದಳ ಆರಂಭಿಸಲಾಯಿತು. ಈಗ ಕರ್ನಾಟಕದಲ್ಲಿ 28 ಸಾವಿರ, ದೇಶಾದ್ಯಂತ ಸುಮಾರು 6 ಲಕ್ಷ ಗೃಹರಕ್ಷಕರಿದ್ದಾರೆ.

ಯಾರು ಸೇರಬಹುದು?: ದೇಶಸೇವೆ ಮಾಡಬೇಕು ಎಂಬ ತುಡಿತ ಇರುವ ಮತ್ತು ಸ್ವಯಂಸೇವಾ ಮನೋಭಾವ ಇರುವ ಸಮಾಜದ ಎಲ್ಲರೂ ಜಾತಿ, ಮತ, ಧರ್ಮ, ಲಿಂಗಭೇದವಿಲ್ಲದೆ ಸೇರಬಹುದು. 19ರಿಂದ 50 ವರ್ಷದ ಒಳಗಿರಬೇಕು ಮತ್ತು ಕನಿಷ್ಟ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಆಗಿರಬೇಕು. ಆಯ್ಕೆಯಾದ ಗೃಹರಕ್ಷಕರಿಗೆ 10 ದಿನಗಳ ಮೂಲ ತರಬೇತಿ ನೀಡಲಾಗುತ್ತದೆ. ನೆರೆಯಿಂದ ರಕ್ಷಣೆ, ಅಗ್ನಿಶಮನ ತರಬೇತಿ ಸೇರಿ ಹಲವು ತರಬೇತಿ ನೀಡಿ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ.

(ಲೇಖಕರು ಮಂಗಳೂರು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net