ಮನೆ ಬದಲು ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ: ಕರೊನಾ ಕೊಂಡಿ ತುಂಡರಿಸಲು ಮಾರ್ಗೋಪಾಯ

25CBP1
Published on

ಚಿಕ್ಕಬಳ್ಳಾಪುರ :  ಸೋಂಕಿತರಿಂದ ಹೋಮ್ ಐಸೋಲೇಷನ್ ನಿಯಮ ಉಲ್ಲಂಘನೆ, ಕುಟುಂಬದ ಇತರ ಸದಸ್ಯರೂ ಸೋಂಕಿತರಾಗುತ್ತಿರುವುದು ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ಬದಲು ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ ನೀಡಲು ಹೆಚ್ಚಿನ ಒತ್ತು ನೀಡಲಾಗಿದೆ.

ಈ ಹಿಂದೆ ಆರೈಕೆ ಕೇಂದ್ರದಲ್ಲಿ 350 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕಳೆದ ಮೂರ್ನಾಲ್ಕು ದಿನಗಳಲ್ಲಿ ಈ ಸಂಖ್ಯೆ 1500ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 5,039 ಸಕ್ರಿಯ ಪ್ರಕರಣಗಳಿವೆ. ಈ ಸಂಖ್ಯೆ 6 ಸಾವಿರಕ್ಕೆ ಸನಿಹ ಬರುತ್ತಿದ್ದಂತೆ ಸೋಂಕಿನ ಗಂಭೀರ ಲಕ್ಷಣ ಹಾಗೂ ಇತರ ಸಮಸ್ಯೆಗಳು ಇಲ್ಲದವರಿಗೆ ಮನೆಯಲ್ಲೇ

ಚಿಕಿತ್ಸೆ ಹಾಗೂ ಔಷಧ ಕಿಟ್ ನೀಡುವ ಮೂಲಕ ಆಸ್ಪತ್ರೆಗಳ ಮೇಲಿನ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಕೆಲವರು ನಿಯಮಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ ಎಲ್ಲೆಡೆ ಸಾಮಾನ್ಯರಂತೆ ಅಲೆದಾಡಿದ್ದಾರೆ. ಮತ್ತೆ ಕೆಲವರು ಮನೆಯಲ್ಲಿ ಪ್ರತ್ಯೇಕವಾಗಿರುವುದನ್ನು ಬಿಟ್ಟು ಕುಟುಂಬದ ಸದಸ್ಯರೊಂದಿಗೆ ಬೆರೆಯುತ್ತಿರುವುದೇ ಪ್ರಕರಣಗಳು ದಿಢೀರ್ ಹೆಚ್ಚಾಗಲು ಕಾರಣ ಎಂಬುದನ್ನು ಅರಿತು ಹೋಮ್ ಐಸೋಲೇಷನ್ ಅನ್ನು ಆದಷ್ಟು ಕಡಿಮೆ ಮಾಡಲಾಗಿದೆ, ಎಲ್ಲ ವ್ಯವಸ್ಥೆಗಳೊಂದಿಗೆ ಶೇ.80 ರಿಂದ 90 ರಷ್ಟು ರೋಗಿಗಳನ್ನು

ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ.

ಮಂಚನಬಲೆಯಲ್ಲಿ ಆರಂಭ

ಚಿಕ್ಕಬಳ್ಳಾಪುರ: ಮಂಚನಬಲೆಯಲ್ಲಿನ ಬಿಜಿಎಸ್ ವಿದ್ಯಾನಿಕೇತನ ಶಾಲೆಯಲ್ಲಿ ತೆರೆದಿರುವ 100 ಹಾಸಿಗೆಗಳ ಸಾಮರ್ಥ್ಯದ ಆರೈಕೆ ಕೇಂದ್ರವನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

ಕರೊನಾ ಸೋಂಕಿಗೆ ತ್ವರಿತವಾಗಿ ಚಿಕಿತ್ಸೆ ಪಡೆದು, ಸೂಕ್ತ ಔಷಧಗಳನ್ನು ಸೇವಿಸಿದಾಗ ಸಂಪೂರ್ಣ ವಾಗಿ ವಾಸಿಯಾಗುತ್ತದೆ. ಆದರೆ, ನಿರ್ಲಕ್ಷ್ಯ ತೋರಿದರೆ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ಹೋಗಿ ಪ್ರಾಣವನ್ನೇ ಕಳೆದು ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನೆಗಳಲ್ಲಿ ಸಮರ್ಪಕ ಸವಲತ್ತ ಹೊಂದಿರದ ಬಡವರಿಗೆ ಕರೊನಾ ಆರೈಕೆ ಕೇಂದ್ರಗಳು ಸಹಕಾರಿಯಾಗಿವೆ. ಇಲ್ಲಿ ಕೆಲ ದಿನ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಹೋಗಬಹುದು. ಇದರಿಂದ ಕುಟುಂಬದ ಇತರ ಸದಸ್ಯರಿಗೂ ಸೋಂಕು ಹರಡುವುದು ತಪ್ಪುತ್ತದೆ ಎಂದು ಶ್ರೀಗಳು ತಿಳಿ ಹೇಳಿದರು.

ಆದಿಚುಂಚನಗಿರಿ ಮಠವು 1 ಸಾವಿರ ಔಷಧ ಕಿಟ್, ಸೋಂಕಿತರನ್ನು ಕೇರ್ ಸೆಂಟರ್‌ಗಳಿಗೆ ಕರೆ ತರಲು ಪ್ರತಿ ತಾಲೂಕಿಗೊಂದು ಬಸ್ ನೀಡಿದೆ. ಇದೇ ಮಾದರಿಯಲ್ಲಿ ಸಂಘ-ಸಂಸ್ಥೆಗಳು ಸರ್ಕಾರದ ಜತೆಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಿಇಒ ಪಿ.ಶಿವಶಂಕರ್, ತಹಸೀಲ್ದಾರ್ ಗಣಪತಿಶಾಸಿ, ತಾಲೂಕು ಆರೋಗ್ಯ ಅಧಿಕಾರಿ ಮಂಜುಳಾ, ತಾಪಂ ಇಒ ಹರ್ಷವರ್ಧನ್ ಇದ್ದರು.

ಮಾನವೀಯತೆ ಪ್ರದರ್ಶನ ಅಗತ್ಯ : ಸಂಕಷ್ಟಕ್ಕೊಳಗಾಗಿರುವವರ ನೋವಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯಬೇಕಾಗಿದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ಕರೆ ನೀಡಿದರು. ತಾಲೂಕಿನ ಸಿಂಗಾಟಕದಿರೇನಹಳ್ಳಿ, ಅಗಲಗುರ್ಕಿ, ಅರಿಕೆರೆ ವಿದ್ಯಾವಿಕಾಸ ಯೋಜನಾ ಕೇಂದ್ರಗಳಲ್ಲಿ ಪಡಿತರ ವಿತರಿಸಿ ಮಾತನಾಡಿದರು. ಇಂದು ದೇಶವೇ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕರೊನಾ ಸೋಂಕಿಗೆ ಹಲವರು ಬಲಿಯಾಗಿ, ಮತ್ತೆ ಅನೇಕರು ನೋವನ್ನು ಅನುಭವಿಸುತ್ತಿದ್ದು ಎಲ್ಲೆಡೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಉಳ್ಳವರು ಮಾನವೀಯತೆ ಪ್ರದರ್ಶಿಸಬೇಕಾಗಿದೆ ಎಂದರು.

ಆರೈಕೆ ಕೇಂದ್ರದಲ್ಲಿ ಗುಣ ಹೆಚ್ಚು : ಜಿಲ್ಲೆಯಲ್ಲಿ ಬಹುತೇಕ ಹಾಸ್ಟೆಲ್‌ಗಳು, ಸಮುದಾಯ ಭವನಗಳನ್ನು ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಲಾಗಿದೆ. ನಿತ್ಯ ಸೋಂಕಿತರಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಬಿಸಿಯೂಟ, ಪೌಷ್ಟಿಕದಾಯಕ ಆಹಾರ ಪದಾರ್ಥಗಳು, ಬಿಸಿ ನೀರು ನೀಡಲಾಗುತ್ತಿದೆ. ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ಡ್ರೈ ಫ್ರೂಟ್ಸ್‌ಗಳನ್ನು ಒದಗಿಸಿದೆ. ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸುವ ಮೂಲಕ ಆತ್ಮಸ್ಥೈರ್ಯ ತುಂಬಲಾಗುತ್ತಿದೆ. ದೃಢಪಟ್ಟ 36,014 ಪ್ರಕರಣಗಳ ಪೈಕಿ ಶೇ.90ರಷ್ಟು ಮಂದಿ ಆರೈಕೆ ಕೇಂದ್ರದಲ್ಲಿನ ಚಿಕಿತ್ಸೆಯಿಂದ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.

ಶೇ.90 ರೋಗಿಗಳ ದಾಖಲಿಸಲು ಒತ್ತು : ಈಗಾಗಲೇ ಜಿಲ್ಲಾದ್ಯಂತ 53 ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ 10 ಸಾವಿರ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಆದಿಚುಂಚನಗಿರಿ ಮಠದ ಸಹಕಾರದೊಂದಿಗೆ ಮಂಚನಬಲೆಯಲ್ಲಿ 100 ಹಾಸಿಗೆಗಳ 54ನೇ ಆರೈಕೆ ಕೇಂದ್ರವನ್ನು ಮಂಗಳವಾರದಿಂದ ಆರಂಭಿಸಲಾಗಿದೆ. ಪ್ರತಿನಿತ್ಯ ಜಿಲ್ಲೆಯಲ್ಲಿ ಕನಿಷ್ಠ 200 ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಸಕ್ರಿಯ ಪ್ರಕರಣಗಳಿಗಿಂತಲೂ ಎರಡರಷ್ಟು ಹಾಸಿಗೆ ವ್ಯವಸ್ಥೆ ಮಾಡಿರುವುದು ಸೋಂಕಿನ ಕೊಂಡಿ ತುಂಡಾಗುವ ನಿರೀಕ್ಷೆ ಮೂಡಿದೆ. ಸೋಂಕಿತರು ಪತ್ತೆಯಾದ 6 ಗಂಟೆಯೊಳಗೆ ಅರ್ಹ ಅನರ್ಹತೆಯನ್ನು ಗುರುತಿಸಿ ಹೋಮ್ ಐಸೋಲೇಷನ್‌ಗೆ ಕ್ರಮ ಕೈಗೊಳ್ಳಲು ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಆಯಾ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಈಗಾಗಲೇ ಸೂಚಿಸಿದ್ದಾರೆ.

ಸೋಂಕಿತರಿಗೆ ಆಸ್ಪತ್ರೆ ಇಲ್ಲವೇ ಹೋಮ್ ಐಸೋಲೇಷನ್ ಚಿಕಿತ್ಸೆಯೇ ಒಳ್ಳೆಯದು. ಆದರೆ, ಅವ್ಯವಸ್ಥೆಯ ದೂರುಗಳು, ತಪ್ಪು ಗ್ರಹಿಕೆಯಿಂದ ಕೆಲವರು ಮನೆಯಲ್ಲಿಯೇ ಉಳಿಯಲು ಬಯಸುತ್ತಿದ್ದಾರೆ. ಸಮರ್ಪಕ ಸವಲತ್ತು, ಸೇವೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸಬೇಕು. ರಾಜೇಶ್ ಖಾಸಗಿ ವೈದ್ಯ ಮುಂಜಾಗ್ರತಾ ಕ್ರಮವಾಗಿ ಹೋಮ್ ಐಸೋಲೇಷನ್ ಪ್ರಮಾಣವನ್ನು ಕಡಿಮೆ ಮಾಡಿ, ಕರೊನಾ ಆರೈಕೆ ಕೇಂದ್ರಕ್ಕೆ ಸೋಂಕಿತರನ್ನು ದಾಖಲಿಸಲು ಆದ್ಯತೆ ನೀಡಲಾಗುತ್ತಿದೆ. ಇದು ಸಹ ಸೋಂಕು ಪ್ರಮಾಣ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಆರ್.ಲತಾ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net