ತುರಿಕೆಯೆಂಬ ಕನವರಿಕೆಗೆ ಮನೆಮದ್ದಿನ ಪರಿಹಾರ

-679673395bc19
Published on
ಚಳಿಗಾಲದಲ್ಲಿ ಮತ್ತು ಚಳಿಗಾಲ ಮುಗಿಯುವ ಸಮಯದಲ್ಲಿ ತುರಿಕೆ ತುಂಬಾ ಜನರನ್ನು ಕಾಡುತ್ತದೆ. ಅದಕ್ಕೆ ಕಾರಣ ಚರ್ಮದಲ್ಲಿರುವ ಜಿಡ್ಡಿನ ಅಂಶ ಕಡಿಮೆಯಾಗುವುದು. ಈ ತುರಿಕೆಯೇನೋ ಕೆಲ ದಿನಗಳ ನಂತರ ತಾನಾಗಿಯೇ ನಿಂತು ಹೋಗುತ್ತದೆ. ಆದರೆ ಬೇರೆ ಬೇರೆ ಕಾರಣಗಳಿಂದ ಉಂಟಾದ ವಿಧವಿಧದ ತುರಿಕೆಯ ಸಮಸ್ಯೆ ಏನು ಮಾಡಿದರೂ ಬಿಡದಂತೆ ಕಾಡುತ್ತದೆ. ಹಾಗಾಗಿ ಇಂದು ನಾವು ತುರಿಕೆಯನ್ನು ಗುಣಪಡಿಸಿಕೊಳ್ಳಲು ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಅದರೊಂದಿಗೆ ಇಂತಹ ತೊಂದರೆಗಳು ಬರದಂತೆ ಹೇಗೆ ನೋಡಿಕೊಳ್ಳುವುದು ಎಂಬುದರ ಬಗ್ಗೆ ಕೂಡ ತಿಳಿದುಕೊಳ್ಳೋಣ.

ತುರಿಕೆ ಇರುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ಕಾರಣ ವಾಗುವುದು ಅಲರ್ಜಿ. ಅಂಥವರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಅರಿಶಿಣವನ್ನು ಬಳಸಬೇಕು. ಏಕೆಂದರೆ ಅರಿಶಿನದ ಬಗ್ಗೆ ವಿವರಿಸು ವಾಗ ಕಂಡ್ನೂ (ತುರಿಕೆ ನಿವಾರಕ), ತ್ವಚ್ಯ (ಚರ್ಮರೋಗ ನಿವಾರಕ) ಎಂದು ಆಯುರ್ವೇದದ ಎಲ್ಲಾ ಗ್ರಂಥಗಳೂ ವಿವರಿಸಿವೆ. ಅಮೃತಬಳ್ಳಿ, ಕಹಿಬೇವು, ಲಾವಂಚ ಈ ಮೂರನ್ನೂ ಎರಡೆರಡು ಗ್ರಾಂನಷ್ಟು ತೆಗೆದುಕೊಂಡು 4 ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ವಾರದಲ್ಲಿ ಒಂದು ಅಥವಾ ಎರಡು ದಿನ ಕುಡಿದರೆ ದೇಹದಲ್ಲಿ ವಿಷದ ಅಂಶ ಕಡಿಮೆಯಾಗಿ ಅಲರ್ಜಿ ಮತ್ತು ತುರಿಕೆಯ ಸಮಸ್ಯೆಗಳು ಗುಣವಾಗಲು ಸಹಾಯವಾಗುತ್ತದೆ.

ಇದಕ್ಕೆ ಅರ್ಧ ಚಮಚ ಅರಿಶಿನದ ಪುಡಿ ಹಾಕಿ ಸೇವಿಸಿದರೆ ಇನ್ನೂ ಒಳ್ಳೆಯದು. ಕೆಮಿಕಲ್​ ಯುಕ್ತ ಆಹಾರ ಪದಾರ್ಥಗಳು, ಉದ್ದು, ಬದನೆಕಾಯಿ, ನುಗ್ಗೆಕಾಯಿ, ಶೇಂಗಾ ಮುಂತಾದ ಅಲರ್ಜಿಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಅಲರ್ಜಿ ಕಡಿಮೆಯಾಗುವವರೆಗೆ ತ್ಯಜಿಸಬೇಕು. ಹುತ್ತದ ಮಣ್ಣಿಗೆ ಅರಿಶಿನವನ್ನು ಸೇರಿಸಿ ಪೇಸ್ಟ್​ ಮಾಡಿ ಅದನ್ನು ಮೈಮೇಲೆ ಲೇಪಿಸಿಕೊಂಡು ಅದು ಒಣಗುವವರೆಗೆ ಬಿಸಿಲಿನ ಸ್ನಾನ ಮಾಡಬೇಕು. ಅತಿಯಾಗಿ ಸಮಸ್ಯೆ ಕಾಡುತ್ತಿದ್ದರೆ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು.

ಫಂಗಲ್​ ಇನ್ಫೆನ್​: ತುರಿಕೆಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಫಂಗಲ್​ ಇನ್ಫೆನ್​. ಇದಕ್ಕೆ ಸಿಹಿಯ ಸೇವನೆಯನ್ನು ಕಡಿಮೆ ಮಾಡಿ, ಮೇಲೆ ಹೇಳಿದ ಕಷಾಯವನ್ನು 15 ದಿನಗಳ ಕಾಲ ಪ್ರತಿನಿತ್ಯ ಸೇವಿಸಬೇಕು. ವಯಸ್ಸಾದಂತೆ ಚರ್ಮದಲ್ಲಿನ ಜಿಡ್ಡಿನ ಅಂಶ ಕಡಿಮೆಯಾಗುವ ಕಾರಣ ತುರಿಕೆ ಉಂಟಾಗುತ್ತದೆ. ಅದನ್ನು ಕಡಿಮೆ ಮಾಡಲು ಮತ್ತು ಬರದಂತೆ ತಡೆಯಲು ನಿತ್ಯವೂ ಎಣ್ಣೆಯ ಮಸಾಜ್​ ಅನ್ನು ಮಾಡಿಕೊಳ್ಳಬೇಕು.

ಚರ್ಮವನ್ನು ಹಾಳು ಮಾಡುವ ಕೆಮಿಕಲ್​ ಯುಕ್ತ ಸಾಬೂನುಗಳ ಬದಲು ಅಂಟವಾಳಕಾಯಿ, ಅರಿಶಿಣ, ಕಡಲೆ ಹಿಟ್ಟುಗಳ ಮಿಶ್ರಣವನ್ನು ಸ್ನಾನಚೂರ್ಣ ವಾಗಿ ಬಳಸಬೇಕು. ಇದರಿಂದ ನಿಜವಾದ ಅರ್ಥದಲ್ಲಿ ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇನ್ನೂ ಹಲವು ರೋಗಗಳಿಂದ ತುರಿಕೆ ಬರಬಹುದು. ಹಾಗಾಗಿ, ಮನೆಮದ್ದುಗಳಿಂದ ಸಮಸ್ಯೆ ಕಡಿಮೆಯಾಗದೇ ಇದ್ದಾಗ ವೈದ್ಯರ ಭೇಟಿ ಮಾಡಿ ಕಾರಣವನ್ನು ಪತ್ತೆ ಹಚ್ಚಿಕೊಂಡು ಔಷಧ ಮಾಡಬೇಕು. ಉಪವಾಸ, ಪಂಚಕರ್ಮ ಚಿಕಿತ್ಸೆಗಳು, ಹೆಸರುಬೇಳೆ, ತುಪ್ಪ, ಬೆಣ್ಣೆ, ನೆಲ್ಲಿಕಾಯಿ, ದಾಳಿಂಬೆ, ಹಾಗಲಕಾಯಿ ಯಂತಹ ಕಹಿ ಪದಾರ್ಥಗಳು, ಒಣದ್ರಾ, ಪಡುವಾಲಕಾಯಿ, ಬೂದುಗುಂಬಳಕಾಯಿ, ಅರಿಶಿಣ, ಕೊತ್ತಂಬರಿ, ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಶ್ರೀಗಂಧ, ಸೊಗದೆ ಬೇರು ಮುಂತಾದ ಪದಾರ್ಥಗಳು ಬಹುತೇಕ ಎಲ್ಲ ರೀತಿಯ ತುರಿಕೆಗಳಲ್ಲಿಯೂ ಅನುಕೂಲಕಾರಿ.

ಪ್ರಾಣಾಯಾಮ, ಮುದ್ರೆ: ಅನುಲೋಮ ವಿಲೋಮ, ಭ್ರಾಮರಿಯಂತಹ ಪ್ರಾಣಾಯಾಮಗಳು, ಭ್ರಮರ ಮುದ್ರೆ, ವರುಣ ಮುದ್ರೆಯಂತಹ ಮುದ್ರೆಗಳು ತುಂಬಾ ಅನುಕೂಲಕರ. ಎಷ್ಟು ಪ್ರಯತ್ನಿಸಿದರೂ ಕಡಿಮೆಯಾಗದ ತುರಿಕೆ ಇರುವಾಗ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆ, ಔಷಧಗಳ ಮೂಲಕ ಈ ರೋಗವನ್ನು ವಾಸಿ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ತುರಿಕೆಯನ್ನು ಹೋಗಲಾಡಿಸಿಕೊಳ್ಳುವುದು ಅಷ್ಟು ದೊಡ್ಡ ಕಷ್ಟದ ಮಾತೇನಲ್ಲ.

(ಪ್ರತಿಕ್ರಿಯಿಸಿ:vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net