ಕಳೆದ ಐದು ವರ್ಷಗಳಲ್ಲಿ ಭಾರತವನ್ನು ಬಿಟ್ಟು ಹೋಗಿದ್ದಾರೆ ಆರು ಲಕ್ಷಕ್ಕೂ ಅಧಿಕ ಮಂದಿ!!!

Citizenship F
Published on

ನವದೆಹಲಿ: ಭಾರತದಲ್ಲಿ ದೇಶ ಬಿಟ್ಟು ಹೋಗುವುದಾಗಿ ಬಾಯ್ಮಾತಿಗೆ ಹೇಳಿದ ಉದಾಹರಣೆಗಳು ಬಹಳಷ್ಟಿವೆ. ಚಿತ್ರನಟ ಅಮೀರ್​ ಖಾನ್​, ಸಾಹಿತಿ ಯು.ಆರ್. ಅನಂತಮೂರ್ತಿ ಮುಂತಾದವರು ಭಾರತವನ್ನು ತೊರೆಯುವ ಕುರಿತು ಮಾತನಾಡಿದ್ದರು. ಎಷ್ಟೋ ಸಲ ಸುಮ್ಮನೆ ರಾಜಕೀಯ ಹಾಗೂ ತತ್ವ-ಸಿದ್ಧಾಂತಗಳ ಕಾರಣಕ್ಕೆ ಇಂಥದ್ದೊಂದು ಹೇಳಿಕೆ ಬಂದುಹೋಗಿದ್ದವು.

ಆದರೆ ಇದೀಗ ನಿಜಕ್ಕೂ ಭಾರತವನ್ನು ಬಿಟ್ಟು ಹೋದವರೆಷ್ಟು ಎಂಬ ಮಾಹಿತಿಯೊಂದು ಬಹಿರಂಗಗೊಂಡಿದೆ. ಆ ಕುರಿತ ಅಂಕಿ-ಅಂಶವನ್ನು ಇಂದು ಲೋಕಸಭೆ ಅಧಿವೇಶನದಲ್ಲಿ ಗೃಹ ಸಚಿವಾಲಯವೇ ಬಹಿರಂಗಪಡಿಸಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಪೌರತ್ವ ಪಡೆದವರೆಷ್ಟು ಹಾಗೂ ಭಾರತವನ್ನು ತೊರೆದು ಬೇರೆ ದೇಶಗಳ ಪೌರತ್ವ ಪಡೆದವರೆಷ್ಟು ಎಂಬ ಮಾಹಿತಿಯನ್ನು ಅದು ಸದನಕ್ಕೆ ನೀಡಿದೆ.

ಭಾರತದ ಪೌರತ್ವ ಪಡೆದವರು ಹಾಗೂ ಭಾರತವನ್ನು ತೊರೆದು ಹೋದವರ ಸಂಖ್ಯೆಯ ನಡುವೆ ಅಜಗಜಾಂತರ ಇರುವುದು ಇದೀಗ ಚರ್ಚೆಯ ವಿಷಯವಾಗಿದೆ. ಈ ಕುರಿತು ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಲಾರಂಭಿಸಿವೆ.

ಗೃಹ ಸಚಿವಾಲಯ ಅಧಿವೇಶನದಲ್ಲಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅಂದರೆ 2016ರಿಂದ 2020ರ ವರೆಗೆ 4177 ಮಂದಿಗೆ ಭಾರತದ ಪೌರತ್ವ ನೀಡಲಾಗಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಅಂದರೆ 2017ರಿಂದ 2021ರ ಸೆ. 30ರ ವರೆಗೆ 6 ಲಕ್ಷಕ್ಕೂ ಅಧಿಕ ಮಂದಿ ಭಾರತವನ್ನು ಬಿಟ್ಟು ಹೋಗಿ ಬೇರೆ ದೇಶಗಳ ಪೌರತ್ವ ಪಡೆದಿದ್ದಾರೆ.

ಭಾರತದ ಪೌರತ್ವ ಬಿಟ್ಟವರ ಪ್ರಮಾಣ

  • 2017: 1,33,049
  • 2018: 1,34,561
  • 2019: 1,44,017
  • 2020: 85,248
  • 2021: 1,11,297 (ಸೆ. 30ರ ವರೆಗೆ)
  • ಒಟ್ಟು: 6,08,172
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net