

ನವದೆಹಲಿ: ವಿದೇಶದಿಂದ ಭಾರತಕ್ಕೆ ಪ್ರವಾಸಿ ವೀಸಾ ಮೇಲೆ ಬರುವವರ ಮೇಲೆ ಹಲವು ನಿರ್ಬಂಧಗಳಿರುತ್ತವೆ. ಅದರಲ್ಲೂ ಮುಖ್ಯವಾಗಿ ಯಾವುದಾದರೂ ಕಾರ್ಯಕ್ರಮಕ್ಕೆಂದು ಬಂದಿದ್ದರೆ, ಅದರಲ್ಲಿ ಪಾಲ್ಗೊಳ್ಳಲು ಮಾತ್ರ ಅವಕಾಶ ಕಲ್ಪಿಸಿರಲಾಗುತ್ತದೆ.
ದೆಹಲಿಯ ನಿಜಾಮುದ್ದೀನ್ನಲ್ಲಿರುವ ತಬ್ಲಿಘಿ ಜಮಾತ್ಗೆ ಬರುವವರು ಅಲ್ಲಿ ಮೌಲ್ವಿಗಳು ನೀಡುವ ಭಾಷಣ ಅಥವಾ ಧಾರ್ಮಿಕ ಉಪನ್ಯಾಸಗಳನ್ನು ಆಲಿಸಲಷ್ಟೇ ಅವಕಾಶವಿದೆ ಹೊರತು, ಇನ್ನಾವುದೇ ಧರ್ಮ ಪ್ರಸಾರ ಕಾರ್ಯದಲ್ಲಿ ಅಥವಾ ತಬ್ಲಿಘಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2015ರಿಂದ ತಬ್ಲಿಘಿ ಜಮಾತ್ಗೆ ಭೇಟಿ ನೀಡಲು ಪ್ರವಾಸಿ ವೀಸಾ ಪಡೆದು ಬಂದ 4,200ಕ್ಕೂ ಹೆಚ್ಚು ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ. ಧರ್ಮ ಪ್ರಸಾರ ಹಾಗೂ ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ವೀಸಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ. ವೀಸಾ ನಿಯಮ ಉಲ್ಲಂಘಿಸಿದಲ್ಲಿ ಎರಡು ವರ್ಷಗಳ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.
2020ರ ಜನವರಿ ನಂತರ 2000ಕ್ಕೂ ಅಧಿಕ ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಪೈಕಿ ಹೆಚ್ಚಿನವರು ಇಂಡೋನೇಷ್ಯಾ, ಮಲೇಷ್ಯಾ, ಮಯನ್ಮಾರ್ ಹಾಗೂ ಬಾಂಗ್ಲಾದೇಶಕ್ಕೆ ಸೇರಿದವರಾಗಿದ್ದಾರೆ.
ಜಮಾತ್ಗೆ ಭೇಟಿ ನೀಡಿ, ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಮುಚ್ಚಿಟ್ಟು ಪ್ರವಾಸಿ ವೀಸಾ ಮೇಲೆ ಬಂದು ಆ ಕಾರ್ಯಗಳಲ್ಲಿ ತೊಡಗುವವರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲಿನಿಂದಲೂ ತಬ್ಲಿಘಿ ಜಮಾತ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರು ಆಗಮಿಸುತ್ತಾರೆ. ಈ ಬಾರಿ ಇಲ್ಲಿಗೆ ಆಗಮಿಸಿದವರಿಂದ ಕರೊನಾ ಹೆಚ್ಚಾಗಿ ಇದೊಂದು ಕರೊನಾ ಹಾಟ್ಸ್ಪಾಟ್ ಎಂದು ಗುರುತಿಸಿಕೊಂಡಿರುವ ಕಾರಣ ವಿದೇಶಿಯರ ಭೇಟಿ ಅಚ್ಚರಿಗೆ ಕಾರಣವಾಗಿದೆ. ಪೊಲೀಸರು, ಆರೋಗ್ಯ ಅಧಿಕಾರಿಗಳು ಇಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ 216 ವಿದೇಶಿಯರು ಕಂಡುಬಂದಿದ್ದಾರೆ.
ಇದೀಗ ಇಲ್ಲಿದ್ದ ಸಾವಿರಾರು ಜನರನ್ನು ದಿಗ್ಬಂಧನಕ್ಕೆ ಗುರಿ ಮಾಡಲಾಗಿದೆ. ಜತೆಗೆ ದೇಶದ ಹಲವು ರಾಜ್ಯಗಳಿಂದ ಇಲ್ಲಿಗೆ ಆಗಮಿಸಿದ್ದ 824 ಜನರು ಸೋಂಕಿತರಾಗಿ ತಮ್ಮೂರುಗಳಿಗೆ ತೆರಳಿದ್ದಾರೆ. ಈ ಜಮಾತ್ನಿಂದಾಗಿಯೇ ಹಲವು ರಾಜ್ಯಗಳು ಕರೊನಾ ಸೋಂಕಿಗೆ ಒಳಗಾಗಿವೆ.