ಸಿಂಥೆಟಿಕ್ ಡ್ರಗ್ ಕಡಿವಾಣಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ

District review meeting
ಶಿವಮೊಗ್ಗ ಡಿಎಆರ್ ಸಭಾಭವನದಲ್ಲಿ ಪೊಲೀಸ್ ಭವನವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಜಿಲ್ಲಾ ವಿಮರ್ಶನಾ ಸಭೆ ನಡೆಸಿದರು. ದಾವಣಗೆರೆ ಪೂರ್ವ ವಯಲದ ಐಜಿಪಿ ಬಿ.ರಮೇಶ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಮಾದಕ ದ್ರವ್ಯ ವ್ಯಸನಿಗಳು ಸಿಂಥೆಟಿಕ್ ಡ್ರಗ್ ಮೊರೆ ಹೋಗುತ್ತಿದ್ದು ಮೆಡಿಕಲ್‌ಗಳಲ್ಲಿ ಸಿಗುವ ಕೆಲ ಮಾತ್ರೆಗಳನ್ನು ಬಳಸುತ್ತಿದ್ದಾರೆ. ಅದಕ್ಕೆ ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚನೆ ನೀಡಿದರು.

ನಗರದ ಡಿಎಆರ್ ಸಭಾಭವನದಲ್ಲಿ ಶನಿವಾರ ಜಿಲ್ಲಾ ವಿಮರ್ಶನಾ ಸಭೆ ನಡೆಸಿದ ಅವರು, ವೈದ್ಯರ ಸಲಹೆ ಇಲ್ಲದೆ ಅಂತಹ ಔಷಧಗಳನ್ನು ಮಾರಾಟ ಮಾಡದಂತೆ ಮೆಡಿಕಲ್‌ನವರಿಗೆ ಎಚ್ಚರಿಕೆ ನೀಡಬೇಕು. ಗಾಂಜಾ ಸೇವನೆ ಮತ್ತು ಮಾರಾಟ ಹಾಗೂ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ರಾಜ್ಯಾದ್ಯಂತ ಗಾಂಜಾ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದನ್ನು ಶಿವಮೊಗ್ಗ ಜಿಲ್ಲೆಯಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಗಾಂಜಾ ಮುಕ್ತ ಜಿಲ್ಲೆ, ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್, ಡಿಜಿಟಲ್ ಅಪರಾಧ, ವಂಚನೆ ಪ್ರಕರಣಗಳು ಇಲಾಖೆಗೆ ಸವಾಲಾಗಿದ್ದು ಸುಶಿಕ್ಷಿತರೇ ಹೆಚ್ಚಾಗಿ ಆನ್‌ಲೈನ್ ಜಾಲಕ್ಕೆ ಸಿಲುಕುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ತಡೆಗಟ್ಟುವುದಕ್ಕೂ ವಿಶೇಷ ಗಮನ ಹರಿಸಬೇಕು. ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಲ್ಲೂ ಜಾಗೃತಿ ಮೂಡಿಸಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಿಬ್ಬಂದಿಯನ್ನು ನೀಡಿ ಸಿಇಎನ್ ಠಾಣೆಗಳ ಬಲವರ್ಧಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಿದೆ. ಮಹಿಳೆಯರ ರಕ್ಷಣೆ ಜತೆಗೆ ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕಿದೆ. ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾ ವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ, ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಶಿಕ್ಷೆ ಆಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಶಿವಮೊಗ್ಗ ಪ್ರವಾಸದ್ಯೋಮ ಜಿಲ್ಲೆಯಾಗಿರುವುದರಿಂದ ಸಾಕಷ್ಟು ಜನರು ವಿವಿಧೆಡೆಯಿಂದ ಪ್ರವಾಸಕ್ಕೆ ಬರುತ್ತಾರೆ. ಕಿಡಿಗೇಡಿಗಳು ಪ್ರವಾಸಿಗರಿಗೆ ತೊಂದರೆ ಉಂಟು ಮಾಡುತ್ತಾರೆ. ಈ ಬಗ್ಗೆ ಹೆಚ್ಚು ನಿಗಾ ವಹಿಸಿ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಬೇಕು. ವಿವಿಧ ಆಚರಣೆಗಳ ಸಂದರ್ಭದಲ್ಲಿ ವಿವಾದಾತ್ಮಕ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿದರೆ ವಿವಾದಗಳು ಸೃಷ್ಟಿಯಾಗುವುದಿಲ್ಲ ಎಂದ ಅವರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳ ಓದಿಗೆ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವರಿಗೆ ವಿವಿಧ ವಿಷಯಗಳ ಅವಶ್ಯಕ ಪುಸ್ತಕಗಳನ್ನು ಒದಗಿಸಬೇಕು ಎಂದು ಹೇಳಿದರು.

ದಾವಣಗೆರೆ ಪೂರ್ವ ವಯಲದ ಡಿಐಜಿಪಿ ಬಿ.ರಮೇಶ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್‌ಪಿಗಳು, ಸಿಪಿಐಗಳು, ಇನ್‌ಸ್ಪೆಕ್ಟರ್‌ಗಳು ವಿಮರ್ಶನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net