ಜೋಶಿ ಮನೆಯಲ್ಲಿ ಅಮಿತ ಉಪಾಹಾರ

Amit Shah
Published on

ಹುಬ್ಬಳ್ಳಿ: ಸಿಎಎ ಮಹಾ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಡೆನಿಸನ್ಸ್ ಹೋಟೆಲ್​ನಲ್ಲಿ ವಾಸ್ತವ್ಯ ಮಾಡಿ ಮಧ್ಯರಾತ್ರಿವರೆಗೂ ಪಕ್ಷದ ಮುಖಂಡರ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಭಾನುವಾರ ಬೆಳಗ್ಗೆ ಬಹಳ ನಿರಾಳವಾಗಿದ್ದರು.

ಬೆಳಗ್ಗೆ ಸ್ವಲ್ಪ ವ್ಯಾಯಾಮ ಮಾಡಿ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದ ಅವರು, 8 ಗಂಟೆ ಸುಮಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಭೇಟಿ ನೀಡಿದರು. ಜೋಶಿಯವರ ಪತ್ನಿ ಜ್ಯೋತಿ ಜೋಶಿ ಮತು ಮಕ್ಕಳು ಆರತಿ ಬೆಳಗಿ ರಾಷ್ಟ್ರೀಯ ಅಧ್ಯಕ್ಷರನ್ನು ಸ್ವಾಗತಿಸಿದರು. ಬೆಳಗಿನ ಉಪಾಹಾರವಾಗಿ ಚೌಚೌ ಬಾತ್, ಅವಲಕ್ಕಿ, ಶೇಂಗಾ ಹೋಳಿಗೆ, ಚಕ್ಕುಲಿ ಸವಿದ ಷಾ, ಪಕ್ಷದ ಮುಖಂಡರು- ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಕೆಲ ಕ್ಷಣ ಬೆರೆತರು. ಚಿಣ್ಣರು ಕೊಟ್ಟ ಗುಲಾಬಿ ಹೂ ಸ್ವೀಕರಿಸಿ ಕೆನ್ನೆ ಸವರಿದರು.

ರೈತ ಮುಖಂಡರು ಹಾಗೂ ಕಾರ್ಯಕರ್ತರು ನೀಡಿದ ಸನ್ಮಾನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮೊದಲಾದವರು ಇದ್ದರು. 9.15ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಅಮಿತ್ ಷಾ ನೇರವಾಗಿ ದೆಹಲಿಗೆ ಪ್ರಯಾಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net