

ಬೆಂಗಳೂರು:
ಗೃಹ ಜ್ಯೋತಿ ಯೋಜನೆಗೆ ಗ್ರಾಮೀಣ ಭಾಗದ ಜನರು ಹೆಚ್ಚು ಉತ್ಸಾಹ ತೋರಿಸಿ ನೋಂದಣಿ ಮಾಡಿಕೊಂಡಿದ್ದರೆ, ನಗರ ಪ್ರದೇಶದಲ್ಲಿ ನಿರೀಕ್ಷೆಯಷ್ಟು ವೇಗದಲ್ಲಿ ನೋಂದಣಿ ಆಗಿಲ್ಲ.
ಜೂ.15ರಂದು ಗೃಹ ಜ್ಯೋತಿ ಯೋಜನೆಗೆ ನೋಂದಣಿಗೆ ಚಾಲನೆ ನೀಡಿದ ಬಳಿಕ 45 ದಿನದಲ್ಲಿ 1.43 ಕೋಟಿ ಜನರು ನೋಂದಣಿಯಾಗಿದ್ದಾರೆ.
ರಾಜ್ಯದಲ್ಲಿ 200 ಯುನಿಟ್‌ಗಿಂತ ಕಡಿಮೆ ಬಳಸುವ 2.14 ಕೋಟಿ ಗ್ರಾಹಕರಿದ್ದು, ಅದರಲ್ಲಿ ಇನ್ನೂ 71 ಲಕ್ಷ ಜನರು ನೋಂದಣಿ ಪ್ರಕ್ರಿಯೆಯಿಂದ ಆಚೆಯೇ ಉಳಿದಿದ್ದಾರೆ. ಟೈರ್ 2 ಮತ್ತು ಟೈರ್ 3 ನಗರ ಮತ್ತು ಪಟ್ಟಣಗಳಲ್ಲಿಯೂ ಗೃಹಜ್ಯೋತಿ ಯೋಜನೆಗೆ ಪೈಪೋಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ, ಟೈರ್ 1 ಪಟ್ಟಿಯಲ್ಲಿರುವ ಬೆಂಗಳೂರು ಮಹಾ ನಗರದಲ್ಲಿಯೇ ನೋಂದಣಿ ಪ್ರಮಾಣ ಶೇ.38 ದಾಟದೆ ಇರುವುದು ಅಚ್ಚರಿ ತಂದಿದೆ. ಬೆಂಗಳೂರಿನ ಎಚ್.ಎಸ್.ಆರ್.ಲೇ ಔಟ್‌ನಲ್ಲಿ ಗೃಹಜ್ಯೋತಿಗೆ ಶೇ.24 ಗ್ರಾಹಕರು ಮಾತ್ರ ನೋಂದಣಿ ಮಾಡಿಸಿಕೊಂಡಿರುವುದು ಅಚ್ಚರಿ ತಂದಿದೆ.
ನಿರ್ಲಕ್ಷ್ಯಕ್ಕೆ ಕಾರಣವೇನು?
ಉಚಿತವಾಗಿ ವಿದ್ಯುತ್ ಸರಬರಾಜು ನೀಡುವ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಲು ಹಿಂದೇಟು ಹಾಕುತ್ತಿರುವುದು ಯಾಕೆ ಎನ್ನುವ ಬಗ್ಗೆ ಇಂಧನ ಇಲಾಖೆ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಯೋಜನೆಯ ಸವಲತ್ತು ಪಡೆದುಕೊಳ್ಳಲು ಆಧಾರ್ ಲಿಂಕ್ ಮಾಡುತ್ತಿರುವುದರಿಂದ ಸರ್ಕಾರದ ಸವಲತ್ತು ಪಡೆಯುತ್ತಿರುವ ಪಟ್ಟಿಯಲ್ಲಿ ಮುಂದೆ ನಮ್ಮ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಹಲವರು ಹಿಂದೇಟು ಹಾಕಿದ್ದಾರೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿದೆ.
ನಮ್ಮ ಉಸಾಬರಿ ನಿಮಗ್ಯಾಕೆ?
ಉಚಿತ ಯೋಜನೆ ಕೊಟ್ಟರೆ ಸರ್ಕಾರವೇ ದಿವಾಳಿ ಆಗಲಿದೆ. ಆದ್ದರಿಂದ ಸರ್ಕಾರದ ಉಚಿತ ಯೋಜನೆಯನ್ನು ಸೈದಾಂತಿಕವಾಗಿ ವಿರೋಧಿಸುತ್ತೇವೆ ಎಂದು ಕೆಲವರು ನೋಂದಣಿಗೆ ಮುಂದೆ ಬಂದಿಲ್ಲ. ನಮ್ಮ ಮನೆಯ ಕರೆಂಟ್ ಬಿಲ್ ನಾವೇ ಕಟ್ಟುತ್ತೇವೆ, ಬೇರೆಯವರಿಗೆ ಯಾಕೆ ನಮ್ಮ ಉಸಾಬರಿ ಎಂದು ಕೆಲವರು ಯೋಜನೆಯಿಂದ ದೂರ ಉಳಿದಿದ್ದಾರೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ. ಇನ್ನು ಕೆಲವರು ಸ್ವಲ್ಪ ದಿನ ಸಾಧಕ ಬಾಧಕ ನೋಡಿಕೊಂಡು ಮುಂದೆ ನೋಂದಣಿ ಮಾಡಿಸೋಣ ಎಂದು ಕಾಯ್ದು ನೋಡುತ್ತಿದ್ದಾರೆ.
2.14 ಕೋಟಿ ಗ್ರಾಹಕರು
ರಾಜ್ಯದಲ್ಲಿ 2.14 ಕೋಟಿ ಗ್ರಾಹಕರು 200 ಯುನಿಟ್‌ಗಿಂತ ಕಡಿಮೆ ಬಳಸುವವರಿದ್ದಾರೆ. ಅದರಲ್ಲಿ ತಾತ್ಕಾಲಿಕ ಸಂಪರ್ಕಗಳನ್ನು ಹೊರತುಪಡಿಸಿದರೆ, 1.80 ಕೋಟಿ ಸಕ್ರೀಯ ಸಂಪರ್ಕಗಳಿವೆ. ಮೊದಲು ಅಂದಾಜಿಸಿದ್ದ ಪ್ರಕಾರ ಗೃಹ ಜ್ಯೋತಿಗೆ ಕನಿಷ್ಠ 2 ಕೋಟಿ ಜನರು ನೋಂದಣಿ ಮಾಡಿಸಿಕೊಳ್ಳಬಹುದು ಎಂದಿತ್ತು. ಈಗಿನ ಅಂದಾಜಿನ ಪ್ರಕಾರ ನೋಂದಣಿ ಸಂಖ್ಯೆ 1.50 ಕೋಟಿ ದಾಟುವುದಿಲ್ಲ ಎಂದು ಹೇಳಲಾಗುತ್ತಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆಯಲ್ಲಿ ಶೇ.60 ಅರ್ಜಿಗಳು ಬಂದಿದ್ದು, ಇನ್ನೂ ಶೇ.5 ರಿಂದ 10 ರಷ್ಟು ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. ನೋಂದಣಿ ಶೇ.70 ದಾಟುವುದು ಕಷ್ಟ ಎಂದು ಅಧಿಕಾರಿಗಳ ವಿವರಣೆ.
ನೋಂದಣಿಗೆ ಡ್ರೈವ್
ಗೃಹಜ್ಯೋತಿ ಯೋಜನೆ ನೋಂದಣಿ ಎಲ್ಲೆಲ್ಲಿ ಕಡಿಮೆ ಆಗಿದೆ ಎನ್ನುವ ಮಾಹಿತಿಯನ್ನು ಪಡೆಯಲಾಗಿದ್ದು, ಅಲ್ಲಿ ನೋಂದಣಿ ಡ್ರೈವ್ ಮಾಡಲು ಉದ್ದೇಶಿಸಲಾಗಿದೆ. ತಪ್ಪು ತಿಳುವಳಿಕೆಯಿಂದ ಯೋಜನೆಯಿಂದ ದೂರ ಉಳಿದಿದ್ದರೆ, ಮಾಹಿತಿ ಇಲ್ಲದೆ ನೋಂದಣಿ ಮಾಡದೆ ಇದ್ದರೆ ಅದನ್ನು ಸರಿಪಡಿಸುವ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಂಧನ ಇಲಾಖೆ ಉದ್ದೇಶಿಸಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಆದ್ಯತೆ ಮೇರೆಗೆ ನೋಂದಣಿ ಡ್ರೈವ್ ಮಾಡಲು ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.
*ಗೃಹಜ್ಯೋತಿ ಯೋಜನೆಗೆ ಕಡಿಮೆ ಅವಧಿಯಲ್ಲಿ ಉತ್ತಮ ಸ್ಪಂಧನೆ ಸಿಕ್ಕಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ನೋಂದಣಿ ಆಗಿದ್ದರೆ, ಮಹಾನಗರವಾದ ಬೆಂಗಳೂರಿನ ಕೆಲ ಭಾಗಗಳಲ್ಲಿ ಅತಿ ಕಡಿಮೆ ನೋಂದಣಿ ಆಗಿದೆ. ಎಲ್ಲೆಲ್ಲಿ ಕಡಿಮೆ ನೋಂದಣಿ ಆಗಿದೆ ಎನ್ನುವುದನ್ನು ಗುರುತಿಸಿ ಅಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.
-ಮಹಾಂತೇಶ ಬೀಳಗಿ, ಬೆಸ್ಕಾಂ ಎಂಡಿ.