

ಈ ತೊಂದರೆ ಮನುಕುಲವನ್ನೇ ಮೂಲೋತ್ಪಾಟನೆ ಮಾಡಿಬಿಡಬಲ್ಲುದು. ಆದ್ದರಿಂದ ಧರ್ಮಗ್ಲಾನಿಯಾದಾಗ ಇಲ್ಲವೇ ಶಿಷ್ಟರಿಗೆ ತೊಂದರೆಯಾದಾಗ ಆತನೇ ಧಾವಿಸಿ ಬರಬೇಕಾದ್ದು ಅನಿವಾರ್ಯವಾಗುತ್ತದೆ. ಬಂದನಂತರ ಅವನ ಕೆಲಸ ಮಲಿನವಾದ ‘ಜೀವನಪದ್ಧತಿ’ಯನ್ನು ಮತ್ತೊಮ್ಮೆ ಶುಚಿಗೊಳಿಸುವುದು. ಶುದ್ಧರೂಪದ ‘ಜೀವನಧರ್ಮ’ವನ್ನು ಎಲ್ಲರಿಗೂ ನೀಡುವುದು. ಇಂತಹ ಜೀವನಧರ್ಮವನ್ನೇ ನಾವು ಭಗವದ್ಗೀತೆಯಲ್ಲಿ ಕಾಣುವುದು. ಆದ್ದರಿಂದ ಗೀತೆ ಕೇವಲ ಮೋಕ್ಷಶಾಸ್ತ್ರವಲ್ಲ, ಜೀವನದ ಯಾವುದೇ ಹಂತದಲ್ಲೂ ಎಲ್ಲರಿಗೂ ಅನ್ವಯಿಸುವ ಉದ್ಧಾರದ ಹಾದಿ. ಆದರೆ, ಯಾರಿಗೆ ಜೀವನದ ಅರ್ಥ ಆಹಾರ, ನಿದ್ದೆ, ಮೈಥುನ ಇಷ್ಟೇ ಆಗಿದೆಯೋ ಅವರಿಗೆ ಗೀತೆಯಿಂದ ಅಂಥ ಪ್ರಯೋಜನವೇನೂ ಇಲ್ಲ! ಬದಲು ಯಾರು ತಮ್ಮ ಜೀವನಕ್ಕೆ ಒಂದು ‘ಮಹತ್ವ’ ಕೊಡಲು ಇಚ್ಛಿಸುತ್ತಾರೋ, ಧೀರನಾಗಬೇಕೆಂದು ಬಯಸುತ್ತಾರೋ, ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ಇರಲು ಆಶಿಸುತ್ತಾರೋ ಅವರೆಲ್ಲರಿಗೂ ಅದ್ಭುತ ಮಾರ್ಗದರ್ಶನ ಗೀತೆಯಲ್ಲಿದೆ.
ಮಹತ್ವವನ್ನು ಆಶಿಸಿದವನಿಗೆ, ಧೀರತೆಯನ್ನು ಬಯಸಿದವನಿಗೆ, ಇತಿಹಾಸದಲ್ಲಿ ಸ್ಥಾನಪಡೆಯಲೆತ್ನಿಸುವವನಿಗೆ ಎಂದಿಗೂ ಯಾವ ಕಾಲದಲ್ಲೂ ಜೀವನ ಒಂದು ಹೋರಾಟವಾಗಿದೆಯೇ ಹೊರತು ಹೂವಿನ ಹಾಸಿಗೆಯಾಗಿಲ್ಲ. ಆದ್ದರಿಂದ ಗೀತೆ ಒಂದರ್ಥದಲ್ಲಿ ಸಮರನೀತಿ! ಸಮರಗೀತೆ! ಆದ್ದರಿಂದಲೇ ಇದನ್ನು ರಣರಂಗದಲ್ಲಿ ಧೀರನೊಬ್ಬನಿಗೆ ಬೋಧಿಸಲಾಗಿದೆ. ಬೇರಾವ ಶಾಸ್ತ್ರವೂ ರಣರಂಗದಲ್ಲಿ ಬೋಧಿಸಲ್ಪಟ್ಟಿಲ್ಲ! ಇನ್ನು ಮೋಕ್ಷವನ್ನೇನೂ ಇಲ್ಲಿ ಕಡೆಗಣಿಸಿಲ್ಲ. ಗೀತೆಯ ಪ್ರಕಾರ ಮೋಕ್ಷವೆಂದರೆ ಅನಂತತೆಯಲ್ಲಿ ಪ್ರತಿಷ್ಠಾಪಿಸಲ್ಪಡುವುದು. Establishing oneself in the fullness of human evolution which is 'perfection'. ಇದಕ್ಕೆ ಅಡ್ಡಿಯಾಗಿರುವುದು ‘ತಾನು ಶರೀರ ; ಶರೀರ ಮನಸ್ಸುಗಳಿಗೆ ತೊಂದರೆಯಾಗದಂತೆ ಬದುಕಬೇಕು’ ಎಂಬ ಭ್ರಾಂತಿ. ಆದ್ದರಿಂದ ಗೀತೆಯ ಮೊದಲನೇ ಪೆಟ್ಟೇ ತಾನು ಶರೀರವೆನ್ನುವ ಭ್ರಾಂತಿಯ ಮೇಲೆ! ತಾನು ಶರೀರ ಇಲ್ಲವೇ ಶರೀರಮನಸ್ಸುಗಳ ಸಂಕೀರ್ಣವಲ್ಲದಿದ್ದರೆ ನಿಜವಾಗಿ ತಾನು ಏನು?
ಅದಕ್ಕೆ ಗೀತೆಯ ಉತ್ತರ ಹೀಗೆ: ಸ್ವಲ್ಪವೇ ವ್ಯಕ್ತವಾಗುತ್ತಿರುವ ಆದರೆ ಮಹಾನ್ ಅದ್ಭುತಗಳನ್ನೊಳಗೊಂಡ ಒಂದು ಉನ್ನತ ಶಕ್ತಿಯೇ ತಾನು! ಯಾವುದನ್ನು ಮತ್ತಾವುದೂ (ಯಾವ ಅರ್ಥದಲ್ಲೂ ಸರಿಯೇ) ಮೀರಿಸಲಾರದೋ ಆ ಆತ್ಮವೇ ತಾನು! ಇದನ್ನೇ ಕಠೋಪನಿಷತ್ ‘ತ ದು ನಾತ್ಯೇತಿ ಕಶ್ಚನ’ ಎಂದು ಸೂಚಿಸುವುದು. ಈ ಶಕ್ತಿಯನ್ನು ವ್ಯಕ್ತಗೊಳಿಸದೇ ಮಹತ್ವವಾಗಲಿ, ಧೀರತೆಯಾಗಲಿ ಬರುವುದಿಲ್ಲ. ಅದನ್ನು ಪೂರ್ಣ ಪ್ರಮಾಣದಲ್ಲಿ ಎಲ್ಲ ರಂಗಗಳಲ್ಲೂ ವ್ಯಕ್ತಗೊಳಿಸುವುದೇ ಗೀತೆಯ ಪ್ರಕಾರ ಜೀವನದ ಗುರಿ. ಈ ಪ್ರಕ್ರಿಯೆ ಧ್ಯಾನ ಇಲ್ಲವೆ ಅರ್ಚನೆಗೆ ಸೀಮಿತವಾಗಿಲ್ಲ. ಕೆಲವು ತತ್ತ್ವಗಳನ್ನು ಅನುಸರಿಸುತ್ತ ಯಾವ ಜೀವನವನ್ನು ನಡೆಸಿದರೂ ಈ ಅವ್ಯಕ್ತ ಶಕ್ತಿ ವ್ಯಕ್ತವಾಗುತ್ತದೆ. ಜೀವನದ ಗುರಿ ಹಾಗೂ ಮಾರ್ಗ ಇವುಗಳಲ್ಲಿ ಜಾಗರೂಕತೆ ಇರಬೇಕು. ಯಾವ ಜೀವನಮಾರ್ಗದಿಂದ ಈ ಅನಂತಶಕ್ತಿ ಪೂರ್ಣಪ್ರಮಾಣದಲ್ಲಿ ವ್ಯಕ್ತವಾಗಬಲ್ಲದೋ ಅದನ್ನೇ ‘ಯೋಗ’ ಎನ್ನುವುದು ಮತ್ತು ಇಂಥ ವ್ಯಕ್ತಿ ಸಹಜವಾಗಿಯೇ ‘ಯೋಗಿ’.
ಹೀಗೆ ಹೇಳಿ ಜೀವನಕ್ಕೆ ಒಂದು ಔನ್ನತ್ಯವನ್ನು ಕೊಡುತ್ತದೆ ಗೀತೆ: ಜೀವನವನ್ನು ತಪಸ್ಸಿನ ಸ್ಥಾನಕ್ಕೆ ಏರಿಸುತ್ತದೆ, ಯುದ್ಧ ಮಾಡುವುದು, ಗುಹೆಯಲ್ಲಿ ಧ್ಯಾನಿಸುವುದು, ಒಂದೇ ಎನ್ನುತ್ತದೆ. ಆದ್ದರಿಂದ ಅರ್ಜುನನಿಗೆ ಶ್ರೀಕೃಷ್ಣನ ಬೋಧನೆ ‘ತಸ್ಮಾತ್ ಯೋಗಿ ಭವಾರ್ಜುನ’; ‘ಅರ್ಜುನ, ಯೋಗಿಯಾಗಿ ಬದುಕುತ್ತಿರು’. ಇದೇ ರೀತಿಯಲ್ಲಿ ಹೇಳುವ ಇನ್ನೊಂದು ಮಾತು, ‘ಮಾಮನುಸ್ಮರ ಯುಧ್ಯ ಚ’; ‘ನನ್ನನ್ನು ನಿರಂತರ ಸ್ಮರಿಸುತ್ತ ಯುದ್ಧ ಮಾಡು’. ಅಂದರೆ ಜೀವನವಿರುವುದೇ ಪೂರ್ಣತೆಯನ್ನು ಸಾಧಿಸುವುದಕ್ಕೆ ಎನ್ನುವ ತತ್ತ್ವದ ಕಡೆಗೆ ನಿರಂತರ ಗಮನವಿಟ್ಟು ಇದಕ್ಕೆ ಬಾಧಕವಾಗುವ ಎಲ್ಲ ಅಂಶಗಳನ್ನೂ ಎದುರಿಸುತ್ತ ಬಾ, ಎಂದಿಗೂ ಪಲಾಯನ ಮಾಡಬೇಡ. ಈ ರೀತಿಯಲ್ಲಿ ಪೂರ್ಣತ್ವವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬಾಧಕಗಳನ್ನು ಎದುರಿಸುವ ಸಂದರ್ಭದಲ್ಲಿ ಮನುಷ್ಯ ನೂರು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅರ್ಜುನನ ವಿಷಯಕ್ಕೆ ಬಂದರೆ ಅಂತಹ ತ್ಯಾಗವೇ ಭೀಷ್ಮ, ದ್ರೋಣರ ವಧೆ. ಆದರೆ ಸಾರ್ವತ್ರಿಕ ನೆಲೆಯಲ್ಲಿ, ‘ಸಂಬಂಧಗಳಿಗಿಂತಲೂ ತತ್ತ್ವನಿಷ್ಠೆಯೇ ಮುಖ್ಯ. ಅರ್ಥಾತ್ ಧರ್ಮದ ಪ್ರಶ್ನೆ ಬಂದಾಗ ಯಾವುದೇ ದಯೆ, ದಾಕ್ಷಿಣ್ಯವೂ ಇರಬಾರದು’ ಎನ್ನುವ ಬದ್ಧತೆಯೇ ಈ ತ್ಯಾಗ. ಧರ್ಮಹೀನನಿಗೆ ದಯೆ ತೋರುವುದು ಎಂದರೇನು?!
‘ನಾನು ಯಾರು?’ ‘ನನ್ನವರು ಯಾರು?’ ಈ ಪ್ರಶ್ನೆಗಳಿಗೆ ಇರುವ ಅರ್ಥವ್ಯಾಪ್ತಿ ವೈಯಕ್ತಿಕ ಹಾಗೂ ಸಾರ್ವತ್ರಿಕ ನೆಲೆಯಲ್ಲಿ ನಮ್ಮ ವಿಕಾಸ ಪ್ರಬುದ್ಧತೆಗಳ ಹಂತವನ್ನು ಸೂಚಿಸುತ್ತದೆ. ಆಳವಾದ ವಿಶ್ಲೇಷಣೆಗೊಳಪಡಿಸಿದಾಗ ಇವುಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಇಲ್ಲವೇ ಏಕತ್ವದ ವೈಶಾಲ್ಯದಲ್ಲಿ ವಿಶ್ವವ್ಯಾಪಿ ಆಗುತ್ತವೆ.
ದಕ್ಷಿಣ ಭಾರತದ ಸುಪ್ರಸಿದ್ಧ ಚಿಂತಕ ಅಪ್ಪಯ್ಯ ದೀಕ್ಷಿತರು ಇದನ್ನು ಮನಮುಟ್ಟುವಂತೆ ತಿಳಿಸುತ್ತಾರೆ.
ತ್ಯಕ್ತವ್ಯೋ ಮಮಕಾರಃ
ತ್ಯಕ್ತುಂ ಯದಿ ಶಕ್ಯತೇ ನಾಸೌ ಕರ್ತವ್ಯೋ ಮಮಕಾರಃ |
ಕಿಂತು ಸರ್ವತ್ರ ಕರ್ತವ್ಯಃ ||
‘ಇವರು ನನ್ನವರು, ಇದು ನನ್ನದು ಎಂಬ ಮಮಕಾರವನ್ನು ತ್ಯಜಿಸಬೇಕು. ಆಗದಿದ್ದಲ್ಲಿ ಎಲ್ಲರೂ ನನ್ನವರೇ ಎಂಬ ವೈಶಾಲ್ಯವನ್ನು ಅದಕ್ಕೆ ನೀಡಬೇಕು. ಈ ‘ಸೀಮಿತ ನನ್ನವರು’ ಜನಿಸುವುದೇ ‘ಸೀಮಿತ ನಾನು’ವಿನಿಂದ. ಇದೇ ಕ್ಷುದ್ರ ಅಹಂ’. ಇಂದು ಮನುಷ್ಯನ ಬೆಳವಣಿಗೆಗೆ, ಆತನ ವಿಕಸನಕ್ಕೆ ಮಹಾನ್ ಶತ್ರುವಾಗಿ ಕೆಲಸಮಾಡುತ್ತಿರುವುದೇ ‘ಕ್ಷುದ್ರ ಅಹಂ’; ಕೇವಲ ಮೋಕ್ಷಕ್ಕಾಗಿ ಅಲ್ಲ ಪ್ರಾಪಂಚಿಕ ಔನ್ನತ್ಯಕ್ಕೂ ಇದೇ ಅಡ್ಡಿ. ದೇಶ-ದೇಶಗಳು ಹಿನ್ನಡೆಯನ್ನು ಅನುಭವಿಸುತ್ತಿರುವುದು ಈ ಅಡ್ಡಿಯಿಂದ. ವ್ಯಕ್ತಿಯೋ, ದೇಶವೋ ಮುಂದುವರಿದಿದ್ದರೆ ಈ ಅಡ್ಡಿ ಸರಿದಿರುವುದೇ ಕಾರಣ. ಇದನ್ನೇ ಗೀತೆ ‘ತ್ಯಾಗ’ವೆನ್ನುವುದು. ಈ ತ್ಯಾಗ ಪೂರ್ಣಪ್ರಮಾಣದಲ್ಲಿ ಇದ್ದರೆ ಅದೇ ‘ಶರಣಾಗತಿ’ ಅರ್ಥಾತ್, ಸಮಷ್ಟಿ ಹಿತದ ಮುಂದೆ ವ್ಯಷ್ಟಿ ಹಿತದ ಶರಣಾಗತಿ.
ಆದರೆ ಇದು ಎಲ್ಲರಿಗೂ ಸಾಧ್ಯವೇ? ಮನುಷ್ಯನ ಇತಿಮಿತಿಗಳನ್ನು ಅರಿತ ಕೃಷ್ಣ ಬೋಧಿಸುತ್ತಾನೆ; ಈ ಮಹಾನ್ ಜೀವನಧರ್ಮವನ್ನು ಲೇಶದಷ್ಟು ಅನುಸರಿಸಿದರೂ ಸಾಕು, ಮಹತ್ತರವಾದ ಭವಿಷ್ಯದ ಭಯದಿಂದ ಪಾರಾಗಬಹುದು. ‘ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’. ಹೀಗೆ ಪ್ರತಿವ್ಯಕ್ತಿಯೂ ತನ್ನ ಸ್ಥಾನದಿಂದಲೇ ಮೇಲೇರಿ ‘ಮಹತ್ವ’ವನ್ನು ಸಾಧಿಸುವ ಜೀವನಶಾಸ್ತ್ರವನ್ನು ಕೃಷ್ಣ ಗೀತೆಯಲ್ಲಿ ಕೊಟ್ಟಿದ್ದಾನೆ. ಆದ್ದರಿಂದ ಗೀತೆಯಲ್ಲಿ ಮೌನಕ್ಕಿಂತ ಮಾತಿಗೆ, ಕ್ರಿಯಾಹೀನತೆಗಿಂತ ಕ್ರಿಯಾಶೀಲತೆಗೆ, ಬಿಡುವುದಕ್ಕಿಂತ ಮಾಡುವುದಕ್ಕೆ ಒತ್ತು ಹೆಚ್ಚು. ಆದರೆ ಒಂದು ಎಚ್ಚರಿಕೆ ; ಯಾವ ಉದ್ದೇಶಕ್ಕಾಗಿ? ‘ಯಜ್ಞಾರ್ಥಾತ್’. ಅಂದರೆ ‘ಬಹುಜನ ಹಿತಾಯ ಬಹುಜನ ಸುಖಾಯ’ವನ್ನು ಗಮನದಲ್ಲಿಟ್ಟುಕೊಂಡು. ಇಂತಹ ಜೀವನ, ಮೋಕ್ಷವನ್ನು ತಾನೇ ತರುತ್ತದೆ. ಯಾರೂ ಆಶಿಸಬೇಕಾಗಿಲ್ಲ. ಆದರೆ ಈಶ್ವರಾರ್ಪಣಕ್ಕಾಗಿ, ಅರ್ಥಾತ್ ಜಗತ್ತಿನ ಹಿತಕ್ಕಾಗಿ ಬದುಕುವುದು ಮೋಕ್ಷವನ್ನೂ ಮೀರಿದ್ದು. ಆದ್ದರಿಂದಲೇ ಕೃಷ್ಣ ಹೇಳುತ್ತಾನೆ ; ಮೋಕ್ಷವನ್ನೂ ತ್ಯಾಗ ಮಾಡು. ಅದಕ್ಕಿಂತಲೂ ಉನ್ನತವಾದ ಹಂತವಿದೆ, ಅದೇ ‘ವಿಜ್ಞಾನ’. ‘ವಿಜ್ಞಾನ’ವೆಂದರೆ ಎಲ್ಲೆಲ್ಲೂ ಪರಮಾತ್ಮನ ಆವಿರ್ಭಾವವನ್ನು ಕಂಡು ಅನಂತಾನಂದದಲ್ಲಿ ಬದುಕುವುದು.
ಒಂದು ಘಟನೆ ಇಲ್ಲಿ ಪ್ರಸ್ತುತ. ಶ್ರೀರಾಮಕೃಷ್ಣರು ಮೃತ್ಯುಶಯ್ಯೆಯಲ್ಲಿ ಮಲಗಿದಾಗ ಪ್ರಿಯ ಶಿಷ್ಯ ನರೇಂದ್ರನೆಡೆಗೆ ನೋಡುತ್ತ ಕೇಳುವರು, ‘ಏನು ಬೇಕು ನಿನಗೆ?’ ನರೇಂದ್ರ ಉತ್ತರಿಸುತ್ತಾನೆ, ‘ನಾನು ನಿರಂತರ ನಿರ್ವಿಕಲ್ಪ ಸಮಾಧಿಯಲ್ಲಿ ನಿಮಗ್ನನಾಗಿರಬೇಕು. ಎಂದೋ ಒಮ್ಮೊಮ್ಮೆ ಎಚ್ಚರಗೊಂಡು ಸ್ವಲ್ಪವೇ ಹಣ್ಣು ತಿಂದು ಮತ್ತೆ ಸಮಾಧಿಸ್ತನಾಗಬೇಕು. ಇಂತಹ ಸ್ಥಿತಿಯನ್ನು ಕರುಣಿಸಿ ನನಗೆ’.
ಬೇರಾರೇ ಗುರುವಾಗಿದ್ದರೂ ಅದೆಷ್ಟು ಆನಂದಪಡುತ್ತಿದ್ದರು! ಇದಕ್ಕಿಂತಲೂ ಉತ್ತಮ ಅವಸ್ಥೆಯನ್ನು ಯಾವ ಅಧ್ಯಾತ್ಮ ಸಾಧಕನೂ ಸಾಮಾನ್ಯವಾಗಿ ಬಯಸುವುದಿಲ್ಲ, ತುಂಬು ಯೌವನದ ನರೇಂದ್ರ ಇದನ್ನು ಬಯಸಿದಾಗ ಅವನ ಅಧ್ಯಾತ್ಮ ಔನ್ಯತ್ಯಕ್ಕೆ, ವೈರಾಗ್ಯಕ್ಕೆ ಗುರುವಾದವನು ಎಷ್ಟು ಆನಂದ ಪಡಬೇಡ! ಆದರೆ ಶ್ರೀರಾಮಕೃಷ್ಣರು ಶಿಷ್ಯನಿಗೆ ಛೀಮಾರಿ ಹಾಕುತ್ತಾರೆ; ‘ಏನಯ್ಯಾ, ಇಷ್ಟು ಅಲ್ಪನೇ ನೀನು?! ಕಣ್ಣು ಮುಚ್ಚಿಕೊಂಡು ದೇವರನ್ನು ಬಯಸುವೆಯಾ? ಅದರಲ್ಲೇನು ದೊಡ್ಡದಿದೆ? ಯಾರು ಬೇಕಾದರೂ ಅದನ್ನು ಮಾಡಬಲ್ಲರು. ಕಣ್ಣು ತೆರೆದುಕೊಂಡು ದೇವರನ್ನು ಕಾಣಲಾರೆಯಾ?! ನಾನು ಭಾವಿಸಿದ್ದೆ, ನೀನೊಂದು ವಿಶಾಲವಾದ ವಟವೃಕ್ಷದಂತೆ ಬೆಳೆದು ನಿನ್ನ ನೆರಳಿನಲ್ಲಿ ಸಾವಿರಾರು ಜನರಿಗೆ ಆಶ್ರಯ ನೀಡುವೆ ಎಂದು, ಆದರೆ ನೀನೊಬ್ಬ ಸ್ವಾರ್ಥಿಯೆಂದು ತಿಳಿದು ಬರುತ್ತಿದೆ. ಮೋಕ್ಷಕ್ಕಾಗಿ ಯತ್ನಿಸುವುದೂ ಸ್ವಾರ್ಥವೇ. ಅದನ್ನೂ ಮೀರಿಹೋಗು’.
ಗೀತೆಯೂ ಇದನ್ನೇ ಬೋಧಿಸುವುದು. ಗೀತೆಯ ಕೊನೆಯ ಅಧ್ಯಾಯದ ಹೆಸರೇ ‘ಮೋಕ್ಷಸಂನ್ಯಾಸಯೋಗ’ ಎಂದು. ಇದೇ ಗೀತೆಯ ಚರಮಸಂದೇಶ. ಮೇಲೆ ತಿಳಿಸಿದ್ದಷ್ಟೇ ಅಲ್ಲದೆ ಇನ್ನೂ ಅನೇಕ ಸತ್ಯಗಳನ್ನೊಳಗೊಂಡ ‘ರತ್ನಗರ್ಭ’ ಭಗವದ್ಗೀತೆ. ಇಡೀ ಗೀತೆಯಲ್ಲಿ ನಾವು ಕಾಣುವುದು ನಿರ್ಭಿಡೆ ಮತ್ತು ನಿರ್ಭೀತಿಗಳಿಂದ ಸತ್ಯಗಳನ್ನು ನಿರ್ಷRಸುವುದು. ಇಲ್ಲಿ ಸತ್ಯಕ್ಕೆ ಮಾತ್ರ ಮಹತ್ವ. ಮನುಷ್ಯನಿಗಿರಬೇಕಾದ, ನಾಗರಿಕ ಸಮಾಜಕ್ಕೆ ಇರಬೇಕಾದ ಮೊದಲ ಬದ್ಧತೆಯೇ ಸತ್ಯವನ್ನು ಗೌರವಿಸಬೇಕಾದದ್ದು. ಸಮಾಜ ಮತ್ತು ಸತ್ಯಗಳ ನಡುವೆ ಘರ್ಷಣೆ ಉಂಟಾದಾಗ ನಮ್ಮ ಗಮನವಿರಬೇಕಾದ್ದು ಸತ್ಯದೆಡೆಗೆ. ಸತ್ಯದ ದಾರಿಯೆಡೆಗೆ ಸಮಾಜವನ್ನು ತಿರಗಿಸಬೇಕಾದ್ದೇ ಹೊರತು ಸತ್ಯವನ್ನೇ ಕೆಳಗಿಳಿಸುವ ಕಡೆಗಲ್ಲ. ಕಡೆಗಣಿಸುವುದಂತೂ ಅಲ್ಲವೇ ಅಲ್ಲ. ಆದ್ದರಿಂದ ಸತ್ಯವನ್ನು ಸಮಾಜದ ಕೈಗೆಟುಕುವಂತೆ ಮಾಡಲು ಅದನ್ನು ಹಲವು ಮಜಲುಗಳಾಗಿ ಒಡೆಯಬೇಕಾದ್ದು ಅನಿವಾರ್ಯ. ಗೀತೆ ಮಾಡಿದ್ದೂ ಇದನ್ನೇ. ಇಲ್ಲವಾದ್ದಲ್ಲಿ ‘ಆಷಾಢಭೂತಿತನ’ವೇ ಸರ್ವವ್ಯಾಪಕತ್ವ ಪಡೆದುಕೊಂಡು ಬಿಡುತ್ತದೆ.
ಯಾವ ಸಮಾಜದಲ್ಲಿ ಉನ್ನತ ಸತ್ಯಗಳು ಅನುಷ್ಠಾನ ಸಾಧ್ಯವಲ್ಲವೋ, ಅದು ಕೇವಲ ಮೃಗಗಳ ಬೀಡು! ನಾಡಲ್ಲ! ಪ್ರತಿಯೊಬ್ಬ ಜವಾಬ್ದಾರಿ ವ್ಯಕ್ತಿ, ಸಂಘ ಮತ್ತು ನೀತಿ-ನಿಯಮಗಳಿಗಿರಬೇಕಾದ ಏಕಮೇವ ಬದ್ಧತೆಯೇ ತಾವು ನೆಲೆಸಿರುವ ಸಮಾಜಗಳನ್ನು ಮಹಾಸತ್ಯಗಳ ಆಶ್ರಯ ತಾಣವನ್ನಾಗಿಸುವುದು. ಆಗಮಾತ್ರ ಅದು ಸದೃಢ, ಸಮರ್ಥ ಸಮಾಜ, ಏಕೆಂದರೆ ‘ಸತ್ಯಮೇವ ಜಯತೇ; ನಾನೃತಂ!’ ಸತ್ಯಕ್ಕೆ ಮಾತ್ರವೇ ಜಯ! ಮತ್ತಾವುದಕ್ಕೂ ಅಲ್ಲ.
ಸಕಲ ರೀತಿಯಲ್ಲೂ ಸಶಕ್ತ, ಸದೃಢವಾಗಿದ್ದಂಥ Greeko-Roma ನಾಗರಿಕತೆಗಳು ಕುಸಿದು ಹೋಗಿದ್ದೇ ಅವರು ಸತ್ಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಳಗಿಳಿಸಿದ್ದರಿಂದ! ನಾವು ಆ ತಪು್ಪ ಮಾಡದಿರೋಣ. ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ನಿರ್ವಿುಸಲಾರ!